ಕೊಡ್ಲಿಪೇಟೆ:ರೋಟರಿ ಹೇಮಾವತಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ: ವಿವಿಧ ಸಮಾಜಮುಖಿ ಕಾರ್ಯಗಳಿಗೆ ಚಾಲನೆ

ಕೊಡ್ಲಿಪೇಟೆ:ರೋಟರಿ ಹೇಮಾವತಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ: ವಿವಿಧ ಸಮಾಜಮುಖಿ ಕಾರ್ಯಗಳಿಗೆ ಚಾಲನೆ
ಕೊಡ್ಲಿಪೇಟೆ:ರೋಟರಿ ಹೇಮಾವತಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ: ವಿವಿಧ ಸಮಾಜಮುಖಿ ಕಾರ್ಯಗಳಿಗೆ ಚಾಲನೆ

ಕೊಡ್ಲಿಪೇಟೆ (Coorgdaily) : ರೋಟರಿ ಹೇಮಾವತಿ ಸಂಸ್ಥೆ ಕೊಡ್ಲಿಪೇಟೆಗೆ ಜಿಲ್ಲಾ ರಾಜ್ಯಪಾಲರ ಭೇಟಿ ನಿಮಿತ್ತ ಪಟ್ಟಣದ ಡಾ.ಉದಯ್‌ ಕಂಫರ್ಟ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ, ಜಿಲ್ಲಾ ರಾಜ್ಯಪಾಲ ವಿಕ್ರಮದತ್ತಾ, ಮನುಷ್ಯ ದಿನ ನಿತ್ಯದ ಜಂಜಾಟಗಳ ನಡುವೆಯೂ ಸಹ ಸಮಾಜಮುಖಿ ಕಾರ್ಯಗಳಿಗೆ ಸಮಯವನ್ನು ಮೀಸಲಿಡಬೇಕು. ಇದಕ್ಕೆ ಸೂಕ್ತ ವೇದಿಕೆ ರೋಟರಿ ಸಂಸ್ಥೆಯಾಗಿದೆ.ಪೊಲೀಯೋ ಪೀಡಿತಳಾದ ಕೇರಳದ ರಾಬಿಯಾ ಸಮಾಜಮುಖಿ ಕೆಲಸಗಳ ಮೂಲಕ ಸಾಧನೆ ಮಾಡಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿದ್ದರೆ. ಆರೋಗ್ಯವಂತಾರಾದ ನಾವೇನು ಸಾಧನೆ ಮಾಡಿದ್ದೇವೆಂದು ಆಲೋಚಿಸಬೇಕು.ಜೀವನ ಕಡಿಮೆ ಅವಧಿಯದ್ದಾಗಿದೆ. ಅದರೊಳಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಸತ್ಕಾರ್ಯ ಮಾಡಿದ್ದು ಮಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದರು.ಮಂಗಳೂರಿನ ಲೇಡಿಘೋಷನ್ ಆಸ್ಪತ್ರೆಯಲ್ಲಿ ಜನನ ಸಮಯದಲ್ಲಿ ಮಕ್ಕಳ ಸಾವಿನ ಪ್ರಮಾಣ ಕಡಿಮೆಯಾಗಲು ಪ್ರಮುಖವಾಗಿ ಕೊಡುಗೆ ನೀಡಿರುವುದು ರೋಟರಿ ಸಂಸ್ಥೆಯಾಗಿದೆ.ಈ ಆಸ್ಪತ್ರೆಗೆ ₹ 7 ಕೋಟಿ ಫಂಡನ್ನು ರೋಟರಿ ಫೌಂಡೇಶನ್ ನೀಡಿದೆ.ಈ ರೀತಿಯ ಸಮಾಜಮುಖಿ ಕಾರ್ಯಗಳು ರೋಟರಿ ಸಂಸ್ಥೆಯಿಂದ ವಿಶ್ವದಾದ್ಯಂತ ಯಥೇಚ್ಛವಾಗಿ ಆಗಿದೆ ಎಂದರು.

 ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ‌.ಹರೀಶ್ ಶೆಟ್ಟಿ, ಮಾತನಾಡಿ ರೋಟರಿ ಸಂಸ್ಥೆಯ ಮುಂದಿನ ಕಾರ್ಯಯೋಜನೆಯ ಕುರಿತು ಮಾಹಿತಿ ನೀಡಿದರು.ರೋಟರಿ ವಲಯ ಸೇನಾನಿ ಜಯಕುಮಾರ್ ಮಾಸ್ಟರ್ ರೋಟರಿ ಹೇಮಾವತಿಯ ಸಮಾಜಮುಖಿ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದ ಸ್ಥಳೀಯ ಸಾಧಕರಾದ, ಸರಕಾರಿ ಆಸ್ಪತ್ರೆಯಲ್ಲಿ 33 ವರ್ಷಗಳಿಂದ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ನೂರಾರು ಹೆರಿಗೆ ಗಳನ್ನು ಸುಸೂತ್ರವಾಗಿ ಮಾಡಿಸಿರುವ ನರ್ಸ್ ವಾಸಂತಿ ಜಯಪ್ಪ ಮತ್ತು ರಾಜ್ಯ ಮಟ್ಟದ ಸಾವಿತ್ರಿಬಾಯಿ ಪೂಲೆ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಿಜ್ವಾನ ಬಾನು ಹಾಗೂ ರಾಷ್ಟ್ರೀಯ ಯುವ ವೇಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ವಿಜೇತೆ ಕುಮಾರಿ ಅಮೃತ ರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಾಯಿತು.ಕೊಡ್ಲಿಪೇಟೆಯಿಂದ ಕೆಲಕೊಡ್ಲಿ ಹಾಸನ ಸಂಪರ್ಕಿಸುವ ನೂತನ ಸೇತುವೆ ಸಮೀಪ ರಸ್ತೆಗೆ ಅಳವಡಿಸಿದ ಮಾರ್ಗಸೂಚಿ ಫಲಕವನ್ನು ಗವರ್ನರ್ ಅನಾವರಣಗೊಳಿಸಿದರು.

ಕಿರಿಕೊಡ್ಲಿ ಅಂಗನವಾಡಿ ಕೇಂದ್ರಕ್ಕೆ ಅವಶ್ಯಕ ಪರಿಕರಗಳನ್ನು ವಿತರಿಸಿದರು.ದೊಡ್ಡಕೊಡ್ಲಿ ಸರಕಾರಿ ಶಾಲೆಯಲ್ಲಿ ನಿರ್ಮಿಸಿರುವ ಗೇಟನ್ನು ಉದ್ಘಾಟಿಸಿ,ತೀವ್ರಾ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಕುಟುಂಬದ ಆಧಾರವಾಗಿದ್ದ ಯುವಕನೊಬ್ಬನ ಮನೆಗೆ ದಿನಸಿ ಸಾಮಾಗ್ರಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಹೇಮಾವತಿ ಅಧ್ಯಕ್ಷ ಮಾದವ್ ಲಾಲ್ ವಹಿಸಿದ್ದರು.ಕಾರ್ಯದರ್ಶಿ ಕೆ.ಆರ್. ಸಾಗರ್ , ಹಮ್ಮಿಕೊಂಡಿದ್ದಂತಹ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು.

ಹರ್ಷಿತಾ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಹೇಮಾವತಿ ರೋಟರಿ ಸಂಸ್ಥೆಯ ಮುಂದಿನ ಅಧ್ಯಕ್ಷ ಉಮೇಶ್ ಯು.ಹೆಚ್.ಕಾರ್ಯದರ್ಶಿ ಗಣೇಶ್ ಚೌಧರಿ ಇದ್ದರು.