ವಿರಾಜಪೇಟೆ: ಪಟ್ಟಡ ಸಿ. ಉತ್ತಯ್ಯ ಜ್ಞಾಪಕಾರ್ಥ ನಿರ್ಮಿಸಿದ ನಾಮಫಲಕ ಲೋಕಾರ್ಪಣೆ ಮಾಡಿದ ಎ.ಎಸ್ ಪೊನ್ನಣ್ಣ
ವಿರಾಜಪೇಟೆಯ: ಇಲ್ಲಿನ ಮಹಿಳಾ ಸಮಾಜದ ಆವರಣದಲ್ಲಿ, ಪಟ್ಟಡ ಸಿ. ಉತ್ತಯ್ಯ ಜ್ಞಾಪಕಾರ್ಥ ಕುಟುಂಬಸ್ಥರು ನಿರ್ಮಿಸಿದ ನಾಮಫಲಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣನವರು ಭಾಗವಹಿಸಿದರು.ಪಟ್ಟಡ ಕುಟುಂಬದ ಪೂರ್ವಜರು ಹಾಗೂ ಕೊಡುಗೈ ದಾನಿಯಾಗಿದ್ದ ಸಿ ಉತ್ತಯ್ಯ ರವರ ಜ್ಞಾಪಕಾರ್ಥ ನಿರ್ಮಿಸಿದ ಈ ಫಲಕವನ್ನು ಮಾನ್ಯ ಶಾಸಕರು ಇಂದು ಲೋಕಾರ್ಪಣೆಗೈದರು.
ಬಳಿಕ ಪಟ್ಟಡ ಕುಟುಂಬಸ್ಥರ ಕೋರಿಕೆ ಮೇರೆಗೆ ಮಾನ್ಯ ಶಾಸಕರು, ಪಟ್ಟಡ ಐನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಆತಿಥ್ಯ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಟ್ಟಡ ಕುಟುಂಬಸ್ಥರು ಹಾಗೂ ಶ್ರೀ ಉತ್ತಯ್ಯರವರು ತಮ್ಮ ಕಾಲಾವಧಿಯಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಿಕೊಂಡರು. ಐನ್ ಮನೆ ಎಂಬುದು ಕೊಡವ ಸಂಸ್ಕೃತಿಯಲ್ಲಿ ಪ್ರತಿಷ್ಠೆಯ ವಿಷಯವಾಗಿದೆ. ಪ್ರತಿ ಕುಟುಂಬಕ್ಕೂ ಅವರದ್ದೇ ಆದ ಐನ್ ಮನೆ ಇದ್ದು, ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ಆದರೂ ಐನ್ ಮನೆಯಲ್ಲಿ ನಡೆಯುವುದು ಸಂಪ್ರದಾಯ. ತಾನು ಶಾಸಕನಾಗಿ ಆಯ್ಕೆಯಾಗಿ ಬಂದ ಮೇಲೆ, ಕ್ಷೇತ್ರದಾದ್ಯಂತ್ಯಂತ ಬರುವ ಐನ್ ಮನೆಗಳ ಅಭಿವೃದ್ಧಿಗಾಗಿ ಅನುದಾನವನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಮಾಡಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಡ ಕುಟುಂಬದ ಪ್ರಮುಖರು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.