ಶ್ರೀ ಭಗಂಡೇಶ್ವರ ದೇವಾಲಯದ ಅತಿಥಿಗೃಹ ನಿರ್ಮಾಣಕ್ಕೆ ₹ 1.40 ಕೋಟಿಯ ಕಾಮಗಾರಿಗೆ ಎಎಸ್ ಪೊನ್ನಣ್ಣ ಭೂಮಿ ಪೂಜೆ

ಭಾಗಮಂಡಲ: ವಿರಾಜಪೇಟೆ ಕ್ಷೇತ್ರ ವ್ಯಾಪ್ತಿ ಅಭಿವೃದ್ಧಿಯ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಿರತರಾಗಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಇಂದು ಮಡಿಕೇರಿ ತಾಲೂಕು ಭಾಗಮಂಡಲ ಗ್ರಾಮಕ್ಕೆ ಆಗಮಿಸಿದರು. ಜೀವನದಿ ಹಾಗೂ ಕೊಡಗಿನ ಆರಾಧ್ಯ ದೇವತೆ ಶ್ರೀ ಕಾವೇರಿ ತಾಯಿ ದೇವಾಲಯದ ಬಂಡಾರ ಮನೆ ಹಾಗೂ ಶ್ರೀ ಭಗಂಡೇಶ್ವರ ದೇವಾಲಯದ ಅತಿಥಿಗೃಹ ನಿರ್ಮಾಣಕ್ಕೆ ಅಂದಾಜು ₹ 1.40 ಕೋಟಿಯ ಕಾಮಗಾರಿಗೆ ಭೂಮಿ ಪೂಜೆಯನ್ನು ಇಂದು ಮಾನ್ಯ ಶಾಸಕರು ನೆರವೇರಿಸಿದರು.
ಪ್ರಸಿದ್ಧ ತೀರ್ಥಕ್ಷೇತ್ರ ಸ್ಥಳವಾದ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಗಳಿಗೆ ಹಲವು ವರ್ಷಗಳಿಂದ ಈ ಬೇಡಿಕೆಗಳು ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಿಂದ ಬಂದಿದ್ದು ಇಂದು ಮಾನ್ಯ ಶಾಸಕರು ಭೂಮಿ ಪೂಜೆ ನೆರವೇರಿಸ ಮೂಲಕ ಬಹುಕಾಲದ ಭಕ್ತಾದಿಗಳ ಕನಸು ನನಸಾಗುವಂಥಾಗಿದೆ. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮಾನ್ಯ ಶಾಸಕರು, ಈ ಎರಡು ಕಾಮಗಾರಿಗಳನ್ನು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಪೂರೈಸಿ ಕೊಟ್ಟು ಭಕ್ತಾದಿಗಳ ಇಚ್ಛೆಯಂತೆ ಇದು ಅತಿ ಶೀಘ್ರದಲ್ಲಿ ಸರ್ವರ ಉಪಯೋಗಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾನ್ಯ ಶಾಸಕರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್ ಕೋಳಿಬೈಲು, ಪಕ್ಷದ ಪ್ರಮುಖರು, ದೇವಸ್ಥಾನ ಮಂಡಳಿಯ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.