ಮಾತು ಬಾರದ ಕಿವಿ ಕೇಳಿಸದ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: 13 ವರ್ಷಗಳ ಬಳಿಕ ಬೆಳಕಿಗೆ ಬಂದ ಅಮಾನವೀಯ ಕೃತ್ಯ

ಮಾತು ಬಾರದ ಕಿವಿ ಕೇಳಿಸದ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ:  13 ವರ್ಷಗಳ ಬಳಿಕ ಬೆಳಕಿಗೆ ಬಂದ ಅಮಾನವೀಯ ಕೃತ್ಯ

ಚಾಮರಾಜನಗರ, ನ. 5: ಮಾತು ಬಾರದ, ಕಿವಿ ಕೇಳಿಸದ ವಿಶೇಷ ಚೇತನ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕನೋರ್ವ ಲೈಂಗಿಕ ಕಿರುಕುಳ ನೀಡಿದ್ದ ಆಘಾತಕಾರಿ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬೆಳಕಿಗೆ ಬಂದಿದೆ.

ಕೊಳ್ಳೇಗಾಲದ ಖಾಸಗಿ ವಾಕ್ ಮತ್ತು ಶ್ರವಣ ಶಾಲೆಯೊಂದರಲ್ಲಿ 2012-13ನೇ ಸಾಲಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

ವಿದ್ಯಾರ್ಥಿನಿ ಮಾತನಾಡಲು ಅಸಮರ್ಥಳಾಗಿದ್ದ ಸಂದರ್ಭವನ್ನು ಶಿಕ್ಷಕ ದುರುಪಯೋಗ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

 ಘಟನೆ ನಡೆದು 13 ವರ್ಷಗಳಾದ ನಂತರ ಇತ್ತೀಚೆಗೆ ಶಾಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಸಂತ್ರಸ್ತೆ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಿಇಒ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.