ಕೇರಳ | ಪಾಲಕ್ಕಾಡ್‌ನಲ್ಲಿ ವಿದ್ಯಾರ್ಥಿನಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲ್ಲಂಗೋಡ್ ಬಿಎಸ್ಎಸ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್-ಟು ವಿದ್ಯಾರ್ಥಿನಿ ಗೋಪಿಕಾ ಬುಧವಾರ ಸಂಜೆ ತನ್ನ ಮನೆಯಿಂದ ಅರ್ಧ ಕಿಲೋಮೀಟರ್ ದೂರದ ಗುಡ್ಡದ ಮೇಲಿನ ನಿರ್ಜನ ಪ್ರದೇಶದಲ್ಲಿ ತೀವ್ರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಶಾಲೆಗೆ ತೆರಳಿದ್ದ ಗೋಪಿಕಾ ಸಂಜೆ ಮನೆಗೆ ಮರಳದ ಹಿನ್ನೆಲೆಯಲ್ಲಿ ತಾಯಿ ಶೀಬಾ ಹುಡುಕಾಟ ನಡೆಸಿದಾಗ, ಸಂಜೆ 6 ಗಂಟೆ ಸುಮಾರಿಗೆ ಆಕೆಯ ಶವ ಪತ್ತೆಯಾಯಿತು. ಮಗಳು ಮೃತಪಟ್ಟ ಸುದ್ದಿ ಕೇಳಿದ ಆಕೆಯ ತಾಯಿಯ ಆಕ್ರಂದನ ಮನ ಕಲುಕುವಂತಿತ್ತು. ನಂತರ ಸ್ಥಳೀಯರು ಸದಸ್ಯ ಬಿ. ಮಣಿಕಂಡನ್ ಅವರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಗೋಪಿಕಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಶಾಲೆಯಿಂದ ಮನೆಗೆ ವಾಪಸು ಬರುವಾಗ ಆಕೆ ಆಗಾಗ್ಗೆ ಆ ಗುಡ್ಡದ ಮೇಲೆ ಸಮಯ ಕಳೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಗೋಪಿಕಾಳ ಬ್ಯಾಗ್, ಮೊಬೈಲ್ ಫೋನ್ ಮತ್ತು ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಡೈರಿಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಉಲ್ಲೇಖಗಳಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶವ ಪತ್ತೆಯಾದ ಸ್ಥಳದ ಸಮೀಪ ಬಂಡೆಯ ಮೇಲೂ ಇಂತಹ ಬರಹಗಳು ಪತ್ತೆಯಾಗಿವೆ. ಆದರೆ ಡೈರಿಯಲ್ಲಿರುವ ಮಾಹಿತಿಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಗೋಪಿಕಾಳ ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಕೊಲ್ಲಂಗೋಡ್ ಪೊಲೀಸರು ಪ್ರಕರಣದ ಕುರಿತು ಸಮಗ್ರ ತನಿಖೆ ಆರಂಭಿಸಿದ್ದಾರೆ.