ಚಿಕ್ಕಮಗಳೂರು:ಹೆಡ್ ಕಾನ್ ಸ್ಟೇಬಲ್ ನೇಣಿಗೆ ಶರಣು

ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ತಮ್ಮ ಪೊಲೀಸ್ ವಸತಿಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಕಾಂತರಾಜ್(45) ಆತ್ಮಹತ್ಯೆಗೆ ಶರಣಾಗಿರುವ ಪೊಲೀಸ್ ಇಲಾಖೆ ಅಧಿಕಾರಿಯಾಗಿದ್ದಾರೆ. ಮೂಲತಃ ತರೀಕೆರೆ ತಾಲೂಕಿನ ಸುಣ್ಣದಹಳ್ಳಿ ಗ್ರಾಮದವರಾದ ಕಾಂತರಾಜ್ ಕಳಸ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯಕ್ಕೆ ಸೇರಿದ್ದರು. ನಂತರ ಎಎನ್‌ಎಫ್‌ನಲ್ಲೂ ಕೆಲಸ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಕಳಸದಿಂದ ತಮ್ಮ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಟ್ರಾಕ್ಟರ್‌ಗೆ ಢಿಕ್ಕಿಯಾಗಿ ಅವರು ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ನಂತರ ಕೃತಕ ಕಾಲು ಅಳವಡಿಸಿಕೊಂಡು ಎಸ್ಪಿ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಕಳೆದ 10ವರ್ಷಗಳಿಂದ ಅವರು ಕೆಲಸ ಮಾಡುತ್ತಿದ್ದರು. ಕಾಲು ಕಳೆದುಕೊಂಡ ಬಳಿಕ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಅವರು ಶುಕ್ರವಾರ ನಗರದ ಬಾರ್‌ಲೈನ್ ರಸ್ತೆಯಲ್ಲಿದ್ದ ಪೊಲೀಸ್ ವಸತಿ ಗೃಹದಲ್ಲಿ ಮನೆ ಮಂದಿ ಊರಿಗೆ ತೆರಳಿದ್ದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.