ಮಗನನ್ನೇ ಕೊಂದ ತಂದೆ:ಒಂದೂವರೆ ವರ್ಷದ ಬಳಿಕ ಬಯಲಾದ ಸತ್ಯ

ಹಾಸನ: ಮಣ್ಣಿನಲ್ಲಿ ಹೂತು ಹಾಕಿದ್ದ ಶವವನ್ನು ಒಂದೂವರೆ ವರ್ಷದ ಬಳಿಕ ಪೊಲೀಸರು ಬಗೆದಿದ್ದು ಹಣದ ವಿಚಾರಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿದ್ದ ಎಂಬ ಸತ್ಯ ಬಯಲಾಗಿದೆ. ರಘು (32) ತಂದೆಯಿಂದ ಕೊಲೆಯಾದ ಮಗ. ಗಂಗಾಧರ ಎಂಬಾತ ಮಗನನ್ನೇ ಹೊಡೆದು ಕೊಂದ ಆರೋಪಿ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿವಾಹವಾಗಿ ವಿಚ್ಛೇದನ ಪಡೆದಿದ್ದ ರಘು ಹಣ ನೀಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಜಗಳ ತಾರಕಕ್ಕೇರಿ ಮಗನನ್ನು ಹೊಡೆದು ಕೊಂದಿದ್ದ. ನಂತರ ಹಿರಿಯ ಮಗ ರೂಪೇಶ್ ಜೊತೆಗೂಡಿ ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ.
ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ಗಂಗಾಧರ ಅವರು ಮೃತಪಟ್ಟಿದ್ದರು. ತಂದೆಯ ಅಂತ್ಯ ಸಂಸ್ಕಾರಕ್ಕೆ ಕಿರಿಯ ಮಗ ರಘುನನ್ನು ಕರೆಸುವಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಹಿರಿಯ ಪುತ್ರನಿಗೆ ಹೇಳಿದ್ದರು. ಎಲ್ಲೋ ಕೆಲಸ ಮಾಡಿಕೊಂಡಿದ್ದಾನೆಂದು ರಘು ಸಾವಿನ ಸುದ್ದಿಯನ್ನು ಬಚ್ಚಿಟ್ಟಿದ್ದರು. ಈ ವೇಳೆ ಕೊಲೆ ರಹಸ್ಯವನ್ನು ರೂಪೇಶ್ ಬಾಯಿ ಬಿಟ್ಟಿದ್ದಾನೆ. ಮನೆ ಸಮೀಪದ ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ ರಘು ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಮೂಳೆ ಹಾಗೂ ತಲೆಬುರುಡೆಯನ್ನು ಹಿಮ್ಸ್ ಗೆ ರವಾನಿಸಲಾಗಿದೆ.