ಹನಿಟ್ರ್ಯಾಪ್ ಕೊಡಗಿನ ಯುವಕನ ಬಂಧನ: ಬಟ್ಟೆ ಅಂಗಡಿ ಮಾಲೀಕನಿಂದ ಹತ್ತು ಲಕ್ಷ ರೂ ಪಡೆದುಕೊಂಡಿದ್ದ ಜೋಡಿ

ಪಿರಿಯಾಪಟ್ಟಣ:ಬಟ್ಟೆ ಅಂಗಡಿ ಮಾಲೀಕನನ್ನು ಹನಿಟ್ರಾಪ್ ಮಾಡಿ 10 ಲಕ್ಷರೂ ಪಡೆದುಕೊಂಡಿದ್ದ ಪ್ರಕರಣದಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದ ಸೈಫು ಹಾಗೂ ಮಂಡ್ಯ ಜಿಲ್ಲೆಯ ಕವನ ಬೈಲುಕೊಪ್ಪ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಹುಣಸೂರಿನ ಪೊಲೀಸ್ ಶಿವಣ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್ ತಿಂಗಳಲ್ಲಿ ಪಿರಿಯಾಪಟ್ಟಣದ ಕಂಪಲಾಪುರ ಬಟ್ಟೆ ಅಂಗಡಿ ಮಾಲೀಕ ಒಬ್ಬನನ್ನು ಹನಿ ಟ್ರ್ಯಾಪ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬೈಲುಕುಪ್ಪೆ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್‌ಇನ್ಸ್ಪೆಕ್ಟರ್ ರವಿಕುಮಾರ್ ಮತ್ತು ತಂಡ ಕೇರಳದ ಕಣ್ಣೂರು ಬಳಿ ಲಾಡ್ಜ್ ಒಂದರಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹುಣಸೂರು ಪೊಲೀಸ್ ಠಾಣೆ ಪೇದೆ ಶಿವಣ್ಣ ಮತ್ತು ಮೂರ್ತಿ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಬಟ್ಟೆ ಅಂಗಡಿ ಮಾಲೀಕನನ್ನು ಹನಿ ಟ್ರ್ಯಾಪ್ ಮಾಡಿ ಆರೋಪಿಗಳು ಸುಮಾರು ೧೦ ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದರು. ಆರೋಪಿಗಳನ್ನು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.