ಇಂಡಿಗೋ ವಿಮಾನ ವ್ಯತ್ಯಯದ ಪರಿಣಾಮ: ಪಿಜಿ ನೀಟ್ ಪ್ರವೇಶ ಗಡುವು ವಿಸ್ತರಣೆ
ಬೆಂಗಳೂರು, ಡಿ.7: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟವು ಅಸ್ತವ್ಯಸ್ತಗೊಂಡಿದ್ದು, ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ನಿರಂತರ ರದ್ದತಿ ಮತ್ತು ವಿಳಂಬದಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿರುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಪಿಜಿ ನೀಟ್ ಪ್ರವೇಶ ಪ್ರಕ್ರಿಯೆಗೆ ಅಗತ್ಯ ದಾಖಲೆ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಆಗಮಿಸಲು ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನಾಂಕವನ್ನು ಮುಂದೂಡಿದೆ.
ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿದ KEA, ಶುಲ್ಕ ಪಾವತಿಗೆ ಡಿಸೆಂಬರ್ 8ರ ಮಧ್ಯಾಹ್ನ 12.30ರವರೆಗೆ ಅವಕಾಶ ನೀಡಿದ್ದು, ದಾಖಲೆ ಸಲ್ಲಿಕೆಗೆ ಮಧ್ಯಾಹ್ನ 2.30ರವರೆಗೆ ಗಡುವು ನಿಗದಿ ಮಾಡಿದೆ. ಮೊದಲು ಡಿ.5ರೊಳಗೆ ಶುಲ್ಕ ಪಾವತಿಸಿ, ಡಿ.6ರಂದು ವರದಿ ಮಾಡಬೇಕು ಎಂದು ಸೂಚಿಸಲಾಗಿತ್ತು.
ಇಂಡಿಗೋ ವಿಮಾನ ರದ್ದತಿಗಳು ಸಾಮಾನ್ಯ ಪ್ರಯಾಣಿಕಲರಿಗೂ ತೊಂದರೆಯಾಗಿದೆ. ಪ್ರಯಾಣ ಸಾಧ್ಯವಾಗದೇ ಕೆಲ ವಧು–ವರರು ಆನ್‌ಲೈನ್ ಆರತಕ್ಷತೆ ನೆರವೇರಿಸಿದ ಘಟನೆಗಳು ಬೆಳಕಿಗೆ ಬಂದಿವೆ. ಇನ್ನು ಖಾಸಗಿ ಬಸ್‌ಗಳು ಬೆಂಗಳೂರು–ಮುಂಬೈ ಮಾರ್ಗದಲ್ಲಿ ಟಿಕೆಟ್ ದರವನ್ನು 10,000 ರೂ.ವರೆಗೆ ಏರಿಕೆ ಮಾಡಿದ್ದು, ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ವಿದೇಶಿ ಪ್ರಯಾಣಿಕರೂ ಇದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜರ್ಮನಿಯಿಂದ ಜೋಧಪುರ್‌ಗೆ ತೆರಳಲು ಬೆಂಗಳೂರಿಗೆ ಬಂದಿದ್ದ ಇಬ್ಬರು ಜರ್ಮನ್ ಪ್ರಜೆಗಳು ಕೊನೆಯ ಕ್ಷಣದಲ್ಲಿ ವಿಮಾನ ರದ್ದಾದ ಕಾರಣ ಇನ್ನೊಂದು ಹಾರಾಟದ ಟಿಕೆಟ್ ಪಡೆಯಲು ಇಂಡಿಗೋ ಕೌಂಟರ್ ಬಳಿ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.
ದೇಶಾದ್ಯಂತ ಕಂಡುಬರುತ್ತಿರುವ ಇಂಡಿಗೋ ವಿಮಾನಗಳ ನಿರ್ವಹಣಾ ವೈಫಲ್ಯ ಹಿನ್ನೆಲೆಯಲ್ಲಿ, ಡಿಜಿಸಿಎ ಇಂಡಿಗೋ ಸಿಇಓ ಪೀಟರ್ ಎಲ್ಬರ್ಸ್ ಅವರಿಗೆ ನೋಟಿಸ್ ನೀಡಿದೆ. 24 ಗಂಟೆಗಳೊಳಗೆ ಸ್ಪಷ್ಟನೆ ಸಲ್ಲಿಸಲು ಸೂಚಿಸಿದ ಡಿಜಿಸಿಎ, ವಿಶ್ವಸನೀಯ ಉತ್ತರ ಸಿಕ್ಕಿಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
