ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್‌ಗೆ ದೆಹಲಿಯ ಕೋರ್ಟ್‌ನಲ್ಲಿ ಚಪ್ಪಲಿಯೇಟು
ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ಸಿಜೆಐ ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿ ರಾಷ್ಟ್ರವ್ಯಾಪಿ ಟೀಕೆಗೆ ಗುರಿಯಾದ ವಕೀಲ ರಾಕೇಶ್ ಕಿಶೋರ್, ಮಂಗಳವಾರ ದೆಹಲಿಯ ಕರ್ಕರ್ದೂಮ ನ್ಯಾಯಾಲಯ ಸಂಕೀರ್ಣದಲ್ಲಿ ಮತ್ತೆ ವಿವಾದಕ್ಕೆ ತುತ್ತಾಗಿದ್ದಾರೆ. ಆವರಣದಲ್ಲಿ ಕೆಲವರು ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಉದ್ವಿಗ್ನತೆಗೆ ಕಾರಣವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ರಾಕೇಶ್ ಮೇಲೆ ಇಬ್ಬರು–ಮೂವರು ಚಪ್ಪಲಿಗಳನ್ನು ಬೀಸುತ್ತಿರುವುದು, ರಾಕೇಶ್ ಸಹ ಪ್ರತಿರೋಧ ತೋರುತ್ತಿರುವುದು ಕಾಣುತ್ತದೆ. ದಾಳಿಕೋರರ ಗುರುತು ಇನ್ನೂ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 6ರಂದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ರಾಕೇಶ್ ಗವಾಯಿ ಅವರತ್ತ ಶೂ ಎಸೆಯಲು ಮುಂದಾಗಿದ್ದರು. ಅಲ್ಲಿದ್ದ ವಕೀಲರು ತಕ್ಷಣ ಅವರನ್ನು ತಡೆದಿದ್ದರು.
ಘಟನೆಯಲ್ಲೂ ಶಾಂತತೆ ತೋರಿದ ಗವಾಯಿ, “ಇದರಿಂದ ನಾನು ವಿಚಲಿತಗೊಳ್ಳುವುದಿಲ್ಲ; ನೀವು ಕೂಡ ಆಗಬೇಡಿ” ಎಂದು ಪೀಠದ ಮುಂದೆ ಸ್ಪಷ್ಟಪಡಿಸಿದ್ದರು. ಈ ಘಟನೆಯ ನಂತರ ರಾಕೇಶ್ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.
