ಹೇಮಾವತಿ ನಾಲೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ

ಹೇಮಾವತಿ ನಾಲೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದ ಕುಮಾರ್(60) ಎಂಬುವರು ಹೇಮಾವತಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದು, ಕುಟುಂಬದವರು ಮತ್ತು ಗ್ರಾಮಸ್ಥರು ಮೃತದೇಹಕ್ಕಾಗಿ ಮೂರು ದಿನಗಳಿಂದ ಕಾಯುತ್ತಿದ್ದಾರೆ. ತಾಲ್ಲೂಕಿನ ಜಾಂದಾಳ್‌–ಹರಿಹರಪುರ ರಸ್ತೆಯ ಹರಿಹರಪುರ ಕೊಪ್ಪಲಿನ ಸಮೀಪ ಹಾದು ಹೋಗಿರುವ ಹೇಮಾವತಿ ನಾಲೆಯಲ್ಲಿ ಸೋಮವಾರ ಮಧ್ಯಾಹ್ನ ಕುಮಾರ್ 12 ಗಂಟೆ ಸುಮಾರಿಗೆ ಅವರು ಕೊಚ್ಚಿ ಹೋಗಿದ್ದಾರೆ.

ಸ್ಥಳೀಯರು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕುಟುಂಬದವರು ಪೊಲೀಸರು ಮತ್ತು ಅಗ್ನಿ ಶಾಮಕ ದಳಕ್ಕೆ ದೂರು ನೀಡಿದ್ದಾರೆ. ಮಂಗಳವಾರ ದೊಡ್ಡಕುಂಚೇವು ಕೆರೆಯಲ್ಲಿ ಹುಡುಕಾಟ ನಡೆಸಿದ ಅಗ್ನಿ ಶಾಮಕ ಸಿಬ್ಬಂದಿ ಮೃತದೇಹ ಸಿಗದೆ ವಾಪಸ್ ಹೋಗಿದ್ದಾರೆ. ‘ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಶವ ಹುಡುಕಾಟ ಕಷ್ಟವಾಗಿದೆ. ನೀರು ನಿಲ್ಲಿಸದೆ ಶವ ಹುಡುಕುವುದು ಕಷ್ಟ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳುತ್ತಿದ್ದಾರೆ. ನೀರು ನಿಲ್ಲಿಸಲು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಒಪ್ಪುತ್ತಿಲ್ಲ. ಜಿಲ್ಲಾಧಿಕಾರಿ ಅವರು ಅಗತ್ಯ ಕ್ರಮ ಕೈಗೊಂಡು ಶವ ಹುಡುಕಿಕೊಡಬೇಕು’ ಎಂದು ಕುಟುಂಬದವರ ಮನವಿ ಮಾಡಿಕೊಂಡಿದ್ದಾರೆ.