ಸಿ ಆ್ಯಂಡ್ ಡಿ ಜಾಗದಲ್ಲಿ ಸರ್ವೆಗೆ ನೋಟೀಸ್ ಜಾರಿ,ಆ.11ರಂದು ಸೋಮವಾರಪೇಟೆ ತಾಲೂಕು ಬಂದ್‌ಗೆ !

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸಿ ಆ್ಯಂಡ್ ಡಿ ಜಾಗದಲ್ಲಿ ಸೆಕ್ಷನ್-4 ಸರ್ವೆಗೆ ನೋಟೀಸ್ ಜಾರಿಯಾಗುತ್ತಿದ್ದು, ರೈತರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು, ರೈತರು ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ರೈತರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಆ.11ರಂದು ಸೋಮವಾರಪೇಟೆ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ಈಗಾಗಲೇ ರೈತ ಹೋರಾಟ ಸಮಿತಿಯಿಂದ ರೈತಪರ ಹೋರಾಟಗಳು ನಡೆಯುತ್ತಿದ್ದು, ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಬಂದ್ ಗೆ ಕರೆ ನೀಡಲಾಗಿದೆ.
ನಂತರ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಸಂದರ್ಭ ಸಮಿತಿಯ ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಪದಾಧಿಕಾರಿಗಳಾದ ಮಿಥುನ್ ಹರಗ, ದಿವಾಕರ್ ಕೂತಿ, ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ಚೌಡ್ಲು ಫ್ಯಾಕ್ಸ್ ಅಧ್ಯಕ್ಷ ಕೆ.ಟಿ.ಪರಮೇಶ್, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಎಸ್.ಬಿ.ಭರತ್, ನಂದಕುಮಾರ್ ಮತ್ತಿತರರು ಇದ್ದರು.