ಜಾಹೀರಾತು ನಂಬಿದ ವ್ಯಕ್ತಿಯ 11 ಲಕ್ಷ ರೂ. ಗುಳುಂ
ಪುಣೆ: “ನನ್ನನ್ನು ಗರ್ಭಿಣಿಯಾಗಿಸುವ ಪುರುಷನಿಗೆ 25 ಲಕ್ಷ ರೂ. ಬಹುಮಾನ” ಎಂಬ ಮಹಿಳೆಯ ವಿಚಿತ್ರ ಜಾಹೀರಾತನ್ನು ನಂಬಿ ಪುಣೆಯ ವ್ಯಕ್ತಿಯೊಬ್ಬ ಸೈಬರ್ ವಂಚಕರ ಬಲೆಗೆ ಸಿಕ್ಕಿ 11 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿತ ಜಾಹೀರಾತಿನಲ್ಲಿ ಮಹಿಳೆಯೊಬ್ಬಳು “ನನಗೆ ತಾಯ್ತನದ ಸುಖ ನೀಡುವ ಪುರುಷನೊಬ್ಬ ಬೇಕು. ಆತ ಯಶಸ್ವಿಯಾದರೆ 25 ಲಕ್ಷ ರೂ. ಕೊಡುತ್ತೇನೆ. ಅನಕ್ಷರಸ್ಥನಾದರೂ, ಯಾವ ಜಾತಿಯವನಾದರೂ ಪರವಾಗಿಲ್ಲ” ಎಂದು ಹೇಳುತ್ತಿದ್ದಳು.
ಈ ವೀಡಿಯೋದಲ್ಲಿದ್ದ ಸಂಪರ್ಕ ಸಂಖ್ಯೆಗೆ 44 ವರ್ಷದ ಗುತ್ತಿಗೆದಾರರೊಬ್ಬರು ಕರೆಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ತಾನು ‘ಪ್ರೆಗ್ನೆಂಟ್ ಜಾಬ್ ಸರ್ವಿಸ್’ ಸಂಸ್ಥೆಯ ಸಹಾಯಕನಾಗಿದ್ದೇನೆ ಎಂದು ಹೇಳಿಕೊಂಡು, ಮಹಿಳೆಯೊಂದಿಗೆ ವಾಸ ಮಾಡಲು ಮೊದಲು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸೂಚಿಸಿದ್ದ.
ಅನಂತರ ನೋಂದಣಿ ಶುಲ್ಕ, ಗುರುತಿನ ಚೀಟಿ, ವೈದ್ಯಕೀಯ ಪರೀಕ್ಷೆ, ಜಿಎಸ್‌ಟಿ, ಟಿಡಿಎಸ್, ಪ್ರೊಸೆಸಿಂಗ್ ಶುಲ್ಕ, ಭದ್ರತಾ ಠೇವಣಿ ಎಂಬ ನೆಪಗಳಲ್ಲಿ ಹಣ ವಸೂಲಿ ಪ್ರಾರಂಭವಾಯಿತು. ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ 23ರವರೆಗೆ ದೂರುದಾರರಿಂದ ಯುಪಿಐ ಮತ್ತು ಐಎಂಪಿಎಸ್ ಮೂಲಕ ಒಟ್ಟು 100ಕ್ಕೂ ಹೆಚ್ಚು ಬಾರಿ 11 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹಣ ಕಳುಹಿಸಿದ ಬಳಿಕ ವಂಚಕರು ಸಂಪರ್ಕ ನಿಲ್ಲಿಸಿ ನಂಬರ್ ಬ್ಲಾಕ್ ಮಾಡಿದರು. ಬಳಿಕ ಮೋಸಕ್ಕೆ ಒಳಗಾದ ವಿಷಯ ಅರಿತ ವ್ಯಕ್ತಿ ಬನೇರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆಯ ಭಾಗವಾಗಿ ಆರೋಪಿಗಳು ಬಳಸಿದ ಮೊಬೈಲ್ ನಂಬರುಗಳು, ಬ್ಯಾಂಕ್ ಖಾತೆಗಳು ಹಾಗೂ ವಾಟ್ಸಾಪ್ ಚಾಟ್‌ಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳ ಪ್ರಕಾರ, ದೇಶದಾದ್ಯಂತ ಕಳೆದ ಎರಡು ವರ್ಷಗಳಿಂದ ಇದೇ ಮಾದರಿಯ “ಪ್ರೆಗ್ನೆಂಟ್ ಜಾಬ್ ಸರ್ವಿಸ್” ವಂಚನೆಗಳು ಹೆಚ್ಚುತ್ತಿವೆ. ಮಹಿಳೆಯರ ವೀಡಿಯೊಗಳನ್ನು ಬಳಸಿ ನಕಲಿ ಜಾಹೀರಾತು ನೀಡಲಾಗುತ್ತಿದ್ದು, ಪುರುಷರನ್ನು ಹಣದ ಆಮಿಷದ ಮೂಲಕ ಬಲೆಗೆ ಸೆಳೆಯಲಾಗುತ್ತಿದೆ.
