2019ರಲ್ಲಿ ನಾಪತ್ತೆಯಾದ ವ್ಯಕ್ತಿಯ ಅಸ್ಥಿಪಂಜರ ಪತ್ತೆ | ಮೂವರು ಸ್ನೇಹಿತರೇ ಆರೋಪಿಗಳು

2019ರಲ್ಲಿ ನಾಪತ್ತೆಯಾದ ವ್ಯಕ್ತಿಯ ಅಸ್ಥಿಪಂಜರ ಪತ್ತೆ | ಮೂವರು ಸ್ನೇಹಿತರೇ ಆರೋಪಿಗಳು
Photo: credit NDTV

ಕೋಯಿಕ್ಕೋಡ್: 2019ರಲ್ಲಿ ನಾಪತ್ತೆಯಾಗಿದ್ದ ವೆಸ್ಟ್ ಹಿಲ್ ಮೂಲದ 35 ವರ್ಷದ ವಿಜಿಲ್ ಅವರದ್ದಾಗಿರಬಹುದು ಎಂದು ಶಂಕಿಸಲಾದ ಅಸ್ಥಿಪಂಜರದ ಅವಶೇಷಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ನೇಹಿತರೇ ಅವರನ್ನು ಹೂತುಹಾಕಿದ್ದಾರೆಂಬ ವಿಷಯ ತನಿಖೆಯಿಂದ ಬಹಿರಂಗವಾಗಿದೆ. ಮಾರ್ಚ್ 24, 2019 ರಂದು ವಿಜಿಲ್ ಅವರು ಮನೆಯಿಂದ ಹೊರಟ ಬಳಿಕ ಕಾಣೆಯಾಗಿದ್ದರು.

 ಅವರ ಮೊಬೈಲ್ ಟವರ್ ಲೋಕೇಶನ್ ಕೊನೆಯದಾಗಿ ಸರೋವರಂ ಪಾರ್ಕ್‌ ನಲ್ಲಿ ದಾಖಲಾಗಿತ್ತು.ಬಳಿಕ ಪೊಲೀಸರು ಕಾಣೆಯಾದ ಕುರಿತು ಪ್ರಕರಣವನ್ನು ದಾಖಲಿಸಿದ್ದರು. ತನಿಖೆಯ ಪ್ರಕಾರ, ವಿಜಿಲ್ ಸ್ನೇಹಿತರಾದ ಎರಂಜ್‌ಪಾಲಂನ ನಿಖಿಲ್ (35) ಮತ್ತು ವೆಂಗೇರಿಯ ದೀಪೇಶ್ (27) ಜೊತೆಯಲ್ಲಿ ಮಾದಕ ದ್ರವ್ಯ ಸೇವಿಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ನಂತರ ಮೃತಪಟ್ಟಿದ್ದಾರೆಂದು ಭಾವಿಸಿದ ಇಬ್ಬರು ಸ್ನೇಹಿತರು, ರೈಲ್ವೆ ನಿಲ್ದಾಣದ ಬಳಿ ತಮ್ಮ ಮೋಟಾರ್‌ಸೈಕಲ್ ಬಿಟ್ಟು, ಮೊಬೈಲ್‌ಗಳನ್ನು ಎಸೆದು, ಎರಡು ದಿನಗಳ ಬಳಿಕ ವಿಜಿಲ್ ಅವರ ಶವವನ್ನು ಜೌಗು ಪ್ರದೇಶದಲ್ಲಿ ಹೂತಿದ್ದರು. ನಂತರ ತಿಂಗಳುಗಳ ಬಳಿಕ ಅವರು ಹಿಂತಿರುಗಿ, ಕೆಲ ಮೂಳೆಗಳನ್ನು ಸಂಗ್ರಹಿಸಿ ವರ್ಕಳದಲ್ಲಿ ನೀರಿನಲ್ಲಿ ಮುಳುಗಿಸಿದ್ದರು. ಪ್ರಕರಣದಲ್ಲಿಯ ಮೂರನೇ ಶಂಕಿತ ರೆಂಜಿತ್ ಪರಾರಿಯಾಗಿದ್ದಾನೆ.

ಇತ್ತೀಚಿನ ಶೋಧ ಕಾರ್ಯಾಚರಣೆಯಲ್ಲಿ, ಸೆಪ್ಟೆಂಬರ್ 11ರಂದು ವಿಜಿಲ್ ಅವರದ್ದೆಂದು ಶಂಕಿಸಲಾದ ಬಟ್ಟೆ ಮತ್ತು ಪಾದರಕ್ಷೆಗಳು ಪತ್ತೆಯಾದರೆ, ಸೆಪ್ಟೆಂಬರ್ 12ರಂದು ಅಸ್ಥಿಪಂಜರದ ಅವಶೇಷಗಳು ಪತ್ತೆಯಾದವು. ಪಕ್ಕೆಲುಬು, ಹಲ್ಲು ಮತ್ತು ದವಡೆಯ ಭಾಗಗಳನ್ನು ಡಿಎನ್‌ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಗಸ್ಟ್ 25ರಂದು ನಿಖಿಲ್ ಮತ್ತು ದೀಪೇಶ್ ಬಂಧಿತರಾಗಿದ್ದು, ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆಗೆ ಸಮಾನವಲ್ಲದ ನರಹತ್ಯೆ), 201 (ಸಾಕ್ಷ್ಯ ಮರೆಮಾಚುವಿಕೆ), 297 (ಸಮಾಧಿ ಸ್ಥಳ ಅತಿಕ್ರಮಣ), ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.