ಸುಪ್ರೀಂ ಕೋರ್ಟ್ | ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ವಕೀಲ ಶೂ ಎಸೆಯಲು ಯತ್ನ
ನವದೆಹಲಿ: ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅಚ್ಚರಿಯ ಘಟನೆ ಸಂಭವಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ವಕೀಲನೋರ್ವ ಶೂ ಎಸೆಯಲು ಯತ್ನಿಸಿದ್ದು, ನ್ಯಾಯಾಲಯದ ಕಲಾಪದ ಮಧ್ಯೆ ಕ್ಷಣಿಕ ಗೊಂದಲ ಉಂಟುಮಾಡಿತು.
ಘಟನೆಯ ನಂತರ ಭದ್ರತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಹೊರಗೆ ಕರೆದೊಯ್ದರು. ಕರೆದೊಯ್ಯುವ ಸಂದರ್ಭದಲ್ಲಿ ಆತ “ಸನಾತನ ಧರ್ಮದ ಅವಮಾನವನ್ನು ಭಾರತ ಸಹಿಸುವುದಿಲ್ಲ” ಎಂದು ಕೂಗಾಡಿದ್ದಾನೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಗವಾಯಿ ಘಟನೆಯ ವೇಳೆ ಶಾಂತರಾಗಿದ್ದು, ಯಾವುದೇ ರೀತಿಯ ವ್ಯತ್ಯಯವಿಲ್ಲದೆ ವಿಚಾರಣೆಯನ್ನು ಮುಂದುವರಿಸಿದರು. “ಇಂತಹ ಘಟನೆಗಳಿಂದ ವಿಚಲಿತರಾಗಬೇಡಿ. ಇವು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಲಾಪ ಮುಂದುವರಿಸಿ,” ಎಂದು ಸಿಜೆಐ ಗವಾಯಿ ಶಾಂತವಾಗಿ ಪ್ರತಿಕ್ರಿಯಿಸಿದರು.
ಘಟನೆಯ ಕುರಿತು ನ್ಯಾಯಾಲಯದ ಭದ್ರತಾ ಇಲಾಖೆಯು ವರದಿ ಸಲ್ಲಿಸಿದ್ದು, ಆರೋಪಿಯ ನಿಖರ ಉದ್ದೇಶವನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಲಾಗಿದೆ.