ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಟೈಗರ್ ಹಿಲ್ ಖ್ಯಾತಿಯ ಲೇಖಕಿ ಸರಿತಾ ಮಂದಣ್ಣ ಸಂವಾದ
ಮಡಿಕೇರಿ, ಜ.13: ಅಂತರರಾಷ್ಟ್ರೀಯ ಖ್ಯಾತಿಯ ಲೇಖಕಿ ಸರಿತಾ ಮಂದಣ್ಣ ಅವರು ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈಗಾಗಲೇ 14 ಭಾಷೆಗಳಿಗೆ ಅನುವಾದಗೊಂಡಿರುವ ಸರಿತಾ ಮಂದಣ್ಣ ಅವರ ಪ್ರಸಿದ್ಧ ಕಥಾಸಂಕಲನ ಟೈಗರ್ ಹಿಲ್ ಬಳಿಕ, ಇದೀಗ ಲೇಖಕಿಯವರು ದಿ ಬೋಲ್ಡ್ ಕ್ರೋನಿಕಲ್ಸ್ ಸರಣಿಯಡಿಯಲ್ಲಿ ದಿ ವಾರ್ ಎಲಿಫಂಟ್ಸ್ ಆಫ್ ಟೈಗರ್ಸ್ ಹಾಗೂ ಸೀಕ್ರೆಟ್ ಅಮಾಂಗ್ ಸ್ಟಾರ್ಸ್ ಎಂಬ ಎರಡು ಮಕ್ಕಳ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಈ ಕಥಾ ಸರಣಿಗಳು ಭಾರತದ 2,500 ವರ್ಷಗಳ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ.
ಇತಿಹಾಸವನ್ನು ತಿಳಿದುಕೊಂಡು ಅದನ್ನು ಸರಳವಾಗಿ ಕಥೆಯ ರೂಪದಲ್ಲಿ ಹೇಗೆ ಬರೆಯಬೇಕು ಎಂಬ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಲೇಖಕಿ ಸರಿತಾ ಮಂದಣ್ಣ, “ಇತಿಹಾಸ ಎಂದರೆ ಕೇವಲ ವರ್ಷಗಳು ಮತ್ತು ದಿನಾಂಕಗಳು ಮಾತ್ರವಲ್ಲ. ಆಗಿನ ಕಾಲಘಟ್ಟವನ್ನು ಮನಗಂಡು ಅದರ ಪ್ರಭಾವವನ್ನು ಅರಿಯುವುದೇ ನಿಜವಾದ ಇತಿಹಾಸ ಅಧ್ಯಯನ” ಎಂದು ಹೇಳಿದರು. ಇಂದಿನ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಅಧ್ಯಯನ ಮಾಡಿದರೆ, ಭವಿಷ್ಯದಲ್ಲಿ ಪ್ರತಿಯೊಬ್ಬರೂ ಹೊಸ ಇತಿಹಾಸವನ್ನು ದಾಖಲಿಸಲು ಸಾಧ್ಯವಿದೆ ಎಂದು ಸರಿತಾ ಮಂದಣ್ಣ ಅವರು ಅಭಿಪ್ರಾಯಪಟ್ಟರು.
ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕಿ ನಿಯತಾ ದೇವಯ್ಯ ಸೋಮಣ್ಣ, ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ. ರವಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.