ಹೆಬ್ಬಾವನ್ನು ಕೊಂದು, ಮಾಂಸದಿಂದ ಆಹಾರ ತಯಾರಿಸಿದ ಇಬ್ಬರ ಬಂಧನ

ಹೆಬ್ಬಾವನ್ನು ಕೊಂದು, ಮಾಂಸದಿಂದ ಆಹಾರ ತಯಾರಿಸಿದ ಇಬ್ಬರ ಬಂಧನ
Photo credit: INDIA TODAY

ಪಣಪುಳ: ಕೇರಳದ ಪಣಪುಳದಲ್ಲಿ ಹೆಬ್ಬಾವನ್ನು ಬೇಟೆಯಾಡಿ ಅದರ ಮಾಂಸದಿಂದ ಅಹಾರ ತಯಾರಿಸಿದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ಪ್ರಮೋದ್ ಮತ್ತು ಬಿನೀಶ್ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಇಬ್ಬರೂ ತಮ್ಮ ಮನೆ ಸಮೀಪದ ರಬ್ಬರ್ ತೋಟದಲ್ಲಿ ಹೆಬ್ಬಾವನ್ನು ಕೊಂದು, ಬಳಿಕ ಪ್ರಮೋದ್ ಅವರ ಮನೆಯಲ್ಲಿ ಹಾವಿನ ಮಾಂಸದಿಂದ ಆಹಾರ ತಯಾರಿಸಿದ್ದರು.

 ಘಟನೆಯ ಸುಳಿವು ಲಭ್ಯವಾದ ತಳಿಪರಂಬ ಅರಣ್ಯ ವ್ಯಾಪ್ತಿಯ ರೇಂಜ್ ಆಫೀಸರ್ ಸುರೇಶ್ ಪಿ ಅವರ ನೇತೃತ್ವದ ತಂಡವು ಆರೋಪಿಗಳ ಮನೆಯನ್ನು ಶೋಧಿಸಿ, ಹಾವಿನ ಅವಶೇಷಗಳು ಹಾಗೂ ತಯಾರಿಸಲಾದ ಮಾಂಸದ ಖಾದ್ಯವನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಗುರುವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.