ಪತಿಯನ್ನು ಸುತ್ತಿಗೆಯಿಂದ ಬಡಿದು ಹತ್ಯೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ ಪತ್ನಿ

ಪತಿಯನ್ನು ಸುತ್ತಿಗೆಯಿಂದ ಬಡಿದು ಹತ್ಯೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ ಪತ್ನಿ
Photo credit: INDIA TODAY

ಜಶ್‌ಪುರ (ಛತ್ತೀಸ್‌ಗಢ): ಗಂಡನನ್ನು ಸುತ್ತಿಗೆಯಿಂದ ಹೊಡೆದು ಕೊಂದು, ಶವವನ್ನು ಟ್ರಾಲಿ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ ಮಹಿಳೆಯ ಕೃತ್ಯ ಜಶ್‌ಪುರದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಕೊಂದ ವಿಷಯವನ್ನು ಆರೋಪಿಯು, ಮಗಳಿಗೆ ಫೋನ್ ಕರೆ ಮಾಡಿ ಹೇಳಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಮಂಗ್ರಿತಾ ಭಗತ್ ಎಂದು ಗುರುತಿಸಲಾದ ಆರೋಪಿ ಮಹಿಳೆ ಕೆಲವು ದಿನಗಳ ಹಿಂದೆ ಮುಂಬೈಯಿಂದ ಮನೆಗೆ ಬಂದಿದ್ದಳು. ಘಟನೆ ನಡೆದ ದಿನ ದಂಪತಿಗಳ ನಡುವೆ ಜಗಳ ತೀವ್ರಗೊಂಡಿದ್ದು, ಕೋಪೋದ್ರಿಕ್ತಳಾದ ಮಂಗ್ರಿತಾ ಕಬ್ಬಿಣದ ಸುತ್ತಿಗೆಯಿಂದ ಪತಿ ಸಂತೋಷ್ ಭಗತ್‌ (43) ಅವರನ್ನು ಹಲವು ಬಾರಿ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ನಂತರ ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಕೆಂಪು ಟ್ರಾಲಿ ಸೂಟ್‌ಕೇಸ್‌ನಲ್ಲಿ ಇಟ್ಟು ಮನೆಯೊಳಗೆ ಬಚ್ಚಿಟ್ಟಿದ್ದಾಳೆ. ಬಳಿಕ ತನ್ನ ವಿವಾಹಿತ ಮಗಳಿಗೆ ಫೋನ್ ಮಾಡಿ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಮಾಹಿತಿ ತಿಳಿದ ಮಗಳು ಮತ್ತು ಆಕೆಯ ಪತಿ ತಕ್ಷಣ ಅಲ್ಲಿಗೆ ತಲುಪಿ, ನಂತರ ಸಂತೋಷ್ ಅವರ ಸಹೋದರ ವಿನೋದ್ ಮಿಂಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಿಂಜ್ ಅವರ ದೂರಿನ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಸೂಟ್‌ಕೇಸ್ ವಶಪಡಿಸಿಕೊಂಡಿದ್ದಾರೆ.

ಸೂಟ್‌ಕೇಸ್‌ ತೆರೆದಾಗ, ಕಂಬಳಿಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಸಂತೋಷ್ ಭಗತ್ ಅವರ ದೇಹ ಪತ್ತೆಯಾಗಿದೆ. ಮುಖ ಮತ್ತು ಕೈಗಳಲ್ಲಿ ಗಾಯದ ಗುರುತುಗಳು ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಜಶ್‌ಪುರ ಎಸ್‌ಎಸ್‌ಪಿ ಶಶಿ ಮೋಹನ್ ಸಿಂಗ್ ಅವರು, ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. “ಪತ್ನಿಯೇ ಪತಿಯನ್ನು ಕೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆಯ ನಂತರ ಆಕೆ ಮುಂಬೈಗೆ ಪರಾರಿಯಾಗಿರುವ ಸಾಧ್ಯತೆ ಇದೆ. ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ.

ಹತ್ಯೆಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ.