ಕೊಡಗು ಜಿಲ್ಲೆಯಲ್ಲಿ ಟಿಂಬರ್ ಸಾಗಾಟ,ಸರಕು ಲಾರಿಗೆ ಅನುಮತಿ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

ಕೊಡಗು ಜಿಲ್ಲೆಯಲ್ಲಿ ಟಿಂಬರ್ ಸಾಗಾಟ,ಸರಕು ಲಾರಿಗೆ ಅನುಮತಿ ನೀಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

ಮಡಿಕೇರಿ: ಕೊಡಗಿನಲ್ಲಿ ಟಿಂಬರ್ ಸಾಗಾಟ, ಸರಕು ಲಾರಿಗೆ ಅನುಮತಿ ನೀಡಲು ಆಗ್ರಹಿಸಿ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಟಿಂಬರ್ ಮರ್ಚೆಂಟ್ ಮತ್ತು ಕಾರ್ಮಿಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಸುದ್ದಿಗಾರರೊಂದಿಗೆ ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಕೊಡಗು ಜಿಲ್ಲೆಯ ಲಾರಿ ಮಾಲೀಕರು, ಚಾಲಕರು ಮಾತ್ರ ಪಾಲಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಹೊರ ಜಿಲ್ಲೆಯಿಂದ 18500 ಕೆ.ಜಿ. ಗಿಂತ ಹೆಚ್ಚಿನ ತೂಕವಿರುವ ಸರಕು ಸಾಗಾಣಿಕೆ ಮಾಡುವ ವಾಹನಗಳು ಎಗ್ಗಿಲ್ಲದೇ ಸಂಚಾರ ಮಾಡುತ್ತಿದೆ. ಇದಕ್ಕೆ ಕಾನೂನಿನಡಿ ಯಾವುದೇ ಕ್ರಮ ಆಗುತ್ತಿಲ್ಲ. ವಾಹನ ಮಾಲೀಕರು ವಾಹನಗಳಿಗೆ ಮಾಡಿರುವ ಸಾಲವನ್ನು ಪಾವತಿಸಲು ಪರದಾಡುವಂತಾಗಿದೆ. ಈ ಸಂಚಾರ ನಿಷೇಧ ಕೊಡಗಿನ ಕಾಫಿ ಬೆಳೆಯುವ ರೈತರ ಪಾಲಿಗೆ ಕೂಡ ಆಘಾತಕಾರಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ ೧೦, ೧೨, ೧೪ ಚಕ್ರ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

 ಟಿಂಬರ್ ಮರ್ಚೆಂಟ್ ಸಂಘಟನೆಯ ಅಧ್ಯಕ್ಷ ಶಮೀರ್ ಮಾತನಾಡಿ, ಜಿಲ್ಲೆಯ ರಸ್ತೆಗಳಲ್ಲಿ 18500 ಕೆ.ಜಿ ಗಿಂತ ಹೆಚ್ಚಿನ ತೂಕವಿರುವ ವಾಹನಗಳು ಸಂಚಾರ ಮಾಡಿದರೆ ರಸ್ತೆ ಹಾಳಾಗುತ್ತದೆ ಎಂದು ಹೇಳುತ್ತಾರೆ. ರಸ್ತೆಗಳ ಗುಣಮಟ್ಟ ಕಾಪಾಡುವುದು ಯಾರ ಹೊಣೆ ಎಂದು ಪ್ರಶ್ನಿಸಿದ ಅವರು, ಗುಣಮಟ್ಟದ ರಸ್ತೆಗಳನ್ನು ಮಾಡಿದರೆ ಯಾವುದೇ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಅದನ್ನು ಮೊದಲು ಮಾಡಿ ಎಂದರು. ಪತ್ರಿಭಟನಾ ನಿರತರು ಟಿಂಬರ್ ವಾಹನ ಸಂಚಾರಕ್ಕೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಲಾರಿ ಚಾಲಕರು, ಮಾಲೀಕರು, ಕಾರ್ಮಿಕರು, ಟಿಂಬರ್ ಮರ್ಚೆಂಟ್‌ಗಳು ಪಾಲ್ಗೊಂಡಿದ್ದರು.