ಹೈಕಮಾಂಡ್ ಬೆದರಿಸಲು ಸಾಧನ ಸಮಾವೇಶ: ವಿಜಯೇಂದ್ರ

ಹೈಕಮಾಂಡ್ ಬೆದರಿಸಲು ಸಾಧನ ಸಮಾವೇಶ: ವಿಜಯೇಂದ್ರ

ಮೈಸೂರು: ಸಿಎಂ ಸ್ಥಾನಕ್ಕೆ ಕಂಟಕ ಬಂದಾಗ ಸಿದ್ಧರಾಮಯ್ಯ ಈ ರೀತಿಯ ಸಮಾವೇಶ ಮಾಡುತ್ತಾರೆ. ಅದೇ ರೀತಿ ನಾಳೆ ಮೈಸೂರಿನಲ್ಲಿ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಬೆದರಿಸುವ ಕೆಲಸಕ್ಕೆ ಈ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ನಾಲ್ಕನೇ ಆಷಾಢ ಶುಕ್ರವಾರದ ಹಿನ್ನೆಲೆ ಕುಟುಂಬಸಮೇತ ಚಾಮುಂಡೇಶ್ವರಿ ದರ್ಶನ ಪಡೆದ ಅವರು, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. "ದೇಶಕ್ಕೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಬೇಕು. ಮೋದಿ ಅವರ ವಿಕಸಿತ ಭಾರತದ ಕನಸು ನನಸಾಗಬೇಕು ಎಂದು ಪಾರ್ಥಿಸಿರುವುದಾಗಿ ಹೇಳಿದರು. ಮೊನ್ನೆ ರಾಹುಲ್ ಗಾಂಧಿ ಸಿದ್ಧರಾಮಯ್ಯಗೆ ತಮ್ಮನ್ನು ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ. ಆದ್ದರಿಂದ ಸಾಧನಾ ಸಮಾವೇಶದ ಹೆಸರಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಬೆದರಿಸುವ ಸಮಾವೇಶ ಮಾಡುತ್ತಿದ್ದಾರೆ. ಇದು ಸಾಧನಾ ಸಮಾವೇಶ ಅಲ್ಲ ಎಂದರು.

 ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಿಎಂ ಹಾಗೂ ಡಿಸಿಎಂ ಏನು ಮಾಡಿದರು ಎಂದು ಗೊತ್ತಿದೆ. ಆನಂತರ ಅಮಾಯಕ ಪೊಲೀಸರನ್ನು ಬಲಿಪಶು ಮಾಡಿದರು. ಇದಕ್ಕಾಗಿ ಸಮಾವೇಶ ಮಾಡುತ್ತಿದ್ದಾರಾ? ಮೈಸೂರಿಗೆ ಇವರ ಸಾಧನೆ ಏನು? ರಾಜ್ಯದ ಅಭಿವೃದ್ಧಿ ಏನಾಗಿದೆ? ಅಭಿವೃದ್ಧಿ ಮಾಡದೇ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ಧರಾಮಯ್ಯ ಸಾಧನಾ ಸಮಾವೇಶ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಸಮಾವೇಶದ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದ ಜೊತೆಗೆ ಡಿ.ಕೆ.ಶಿವಕುಮಾರ್‌ಗೆ ಹಾಗೂ ಹೈಕಮಾಂಡ್‌ಗೆ ಬೆದರಿಸುವ ತಂತ್ರ ಇದು. ಯಾವ ಸಾಧನಾ ಸಮಾವೇಶವೂ ಅಲ್ಲ.

ದಲಿತರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂಬ ಸಿಎಂ ಸಿದ್ಧರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, "ಬಿಜೆಪಿಯಲ್ಲಿ ದಲಿತರನ್ನೇ ರಾಷ್ಟ್ರಪತಿ ಮಾಡಿದ್ದೇವೆ. ಈ ವಿಚಾರದಲ್ಲಿ ಸಿದ್ಧರಾಮಯ್ಯ ಅವರಿಂದ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ದೇವರಾಜ್ ಅರಸ್ ಹಾಗೂ ಅವರ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಕುಟುಂಬ ಏನೆಲ್ಲ ಅಪಮಾನ ಮಾಡಿದೆ ಎಂಬುದನ್ನು ಸಿದ್ಧರಾಮಯ್ಯ ನೆನಪಿಸಿಕೊಳ್ಳಬೇಕು. ಅಹಿಂದ, ಅಹಿಂದ ಎಂದು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈಗ ಸಿದ್ಧರಾಮಯ್ಯ ಮುಖವಾಡ ಕಳಚಿಬಿದ್ದಿದೆ. ಕಾಂತರಾಜು ವರದಿಯನ್ನು ಕಸದಬುಟ್ಟಿಗೆ ಹಾಕಿದ್ದಾರೆ ಎಂದು ತಿರುಗೇಟು ನೀಡಿದರು. ಕುರ್ಚಿ ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬೇರೆ ಬೇರೆ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಸಿಎಂ ಬದಲಾವಣೆ ನಿಶ್ಚಿತ. ಬಿಜೆಪಿ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡಲಿದೆ ಎಂದು ವಾಗ್ದಾಳಿ ನಡೆಸಿದರು. ಮೈಸೂರು ಜಿಲ್ಲಾ ಗ್ರಾಮಾಂತರ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಜತೆಗಿದ್ದರು.