FACT CHECK | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಸಂಪತ್ ಹತ್ಯೆಯಾಗಿಲ್ಲ! ಮತ್ತೆ ಸದ್ದು ಮಾಡುತ್ತಿದೆ 2022ರಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ!!!
ಮಡಿಕೇರಿ: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಗುತ್ತಿಗೆದಾರ ಸಂಪತ್(ಶಂಭು) ಅವರ ಮೃತದೇಹದ ಬುಧವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ಮಾಗೇರಿಯಲ್ಲಿ ಪತ್ತೆಯಾಗಿತ್ತು.ಇದೀಗ ಸಂಪತ್ ಅವರನ್ನು ಹತ್ಯೆಗೈದ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ. ಏತನ್ಮಧ್ಯೆ ರಾಜ್ಯ ಮಟ್ಟದ ಸುದ್ದಿ ವಾಹಿನಿಗಳು ಮತ್ತು ಕೆಲವು ಪತ್ರಿಕೆಗಳು ಹಾಗೂ ವೆಬ್ ನ್ಯೂಸ್, ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದ ಆರೋಪಿ ಶವವಾಗಿ ಪತ್ತೆ ಎಂಬ ಸುಳ್ಳು ಸುದ್ದಿ ಹಾಗೂ ಮಾಹಿತಿಯ ಕೊರತೆಯಿಂದ ಬ್ರೇಕಿಂಗ್ ನೀಡುವ ಹುಚ್ಚಿನಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ.ಹತ್ಯೆಯಾಗಿರುವ ಸಂಪತ್ ಅವರಿಗೆ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣದಲ್ಲಿ ಯಾವುದೇ ಸಂಂಬಧವಿಲ್ಲ.
ಪ್ರಕರಣ ಸತ್ಯಾಸತ್ಯತೆ ಇಲ್ಲಿದೆ ನೋಡಿ!
2022ರ ಆಗಸ್ಟ್ 18ರಂದು ಸಿಎಂ ಸಿದ್ದರಾಮಯ್ಯನವರು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದರು.ಈ ವೇಳೆಯಲ್ಲಿ ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳ ಅವಲೋಕನಕ್ಕೆಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ನವರು ಸಂಚರಿಸುತ್ತಿದ್ದ ಕಾರಿನ ಮೇಲೆ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತ ಹಾಗೂ ಕುಶಾಲನಗರದ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆಯಲಾಗಿತ್ತು.
ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಪ್ರಕರಣದಲ್ಲಿ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸಂಪತ್ ಎಂಬ ವ್ಯಕ್ತಿಯನ್ನು 2022ರಲ್ಲಿ ಬಂಧಿಸಲಾಗಿತ್ತು.ಇದೀಗ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಆರೋಪಿಯ ಶವ ಹಾಸನದಲ್ಲಿ ಪತ್ತೆಯಾಗಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ.ಆದರೆ ಹತ್ಯೆಯಾಗಿರುವ ಸೋಮವಾರಪೇಟೆಯ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಗುತ್ತಿಗೆದಾರ ಸಂಪತ್(ಶಂಭು) ಅವರಿಗೂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣದಲ್ಲಿ ಯಾವುದೇ ರೀತಿಯ ಸಂಬಂಧವೇ ಇಲ್ಲ.ಒಂದೇ ಹೆಸರಿನ ವ್ಯಕ್ತಿಗಳಾಗಿರುವುದರಿಂದ ಯಾವುದೇ ವಿಷಯವನ್ನು ವಿಚಾರಿಸದೆ ಕೆಲವೊಂದು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ.ಈ ಕುರಿತು ಕೂರ್ಗ್ ಡೈಲಿ FACT CHECK ನಡೆಸಿ ಸಾಕ್ಷ್ಯ ಸಮೇತ ನೈಜ ಸುದ್ದಿ ಜನರ ಮುಂದಿಟ್ಟಿದೆ.
