ಮೀನು ಹಂಚಿಕೆಯ ವಿವಾದ,ಕೊಲೆಯಲ್ಲಿ ಅಂತ್ಯ! ಆರೋಪಿಗೆ ಜೀವಾವಧಿ ಶಿಕ್ಷೆ: ಇಲ್ಲಿದೆ ಸಂಪೂರ್ಣ ಸ್ಟೋರಿ

ಮೀನು ಹಂಚಿಕೆಯ ವಿವಾದ,ಕೊಲೆಯಲ್ಲಿ ಅಂತ್ಯ!   ಆರೋಪಿಗೆ ಜೀವಾವಧಿ ಶಿಕ್ಷೆ:  ಇಲ್ಲಿದೆ ಸಂಪೂರ್ಣ ಸ್ಟೋರಿ

(ವರದಿ:ಟಿ.ಜೆ. ಕಿಶೋರ್ ಕುಮಾರ್ ಶೆಟ್ಟಿ)

ವಿರಾಜಪೇಟೆ: ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರ ನಡುವೆ ಮೀನು ಹಂಚಿಕೆಗಾಗಿ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾದ ಘಟನೆಗೆ ಸಂಬಂದಿಸಿದಂತೆ ವಿರಾಜಪೇಟೆ 2 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿ ಆದೇಶ ನೀಡಿದೆ.ಪೊನ್ನಂಪೇಟೆ ತಾಲೂಕಿನ ಕುಟ್ಟ ಕೆ.ಬಾಡಗ ಗ್ರಾಮದ ಚೂರಿಕಾಡು ನಿವಾಸಿ ತಡಿಯಂಗಡ ಎಂ. ತಮ್ಮಯ್ಯ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ನಂಜ ಎಂಬುವವರ ಪುತ್ರ ಪಿ.ಎನ್. ಬೊಳಕ ( 42 ವರ್ಷ) ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಘಟನೆಯ ವಿವರ:

ಪೊನ್ನಂಪೇಟೆ ತಾಲೂಕಿನ ಕುಟ್ಟ ಕೆ.ಬಾಡಗ ಗ್ರಾಮದ ಚೂರಿಕಾಡು ನಿವಾಸಿ ತಡಿಯಂಗಡ ಎಂ. ತಮ್ಮಯ್ಯ ಎಂಬುವವರ ಕಾಫಿ ತೋಟದ ಲೈನ್ ಮನೆಯಲ್ಲಿ ಪಣಿಯರವರ ಬೊಳಕ ಪತ್ನಿ ಬೋಳಚಿ, ರಘು ಮತ್ತು ಜೇನುಕುರುಬರ ಅಯ್ಯಪ್ಪ ಎಂಬ ಕಾರ್ಮಿಕರು ವಾಸವಿದ್ದರು. ದಿನಾಂಕ 23/03/2021 ರಂದು ತೋಟದ ಮಾಲೀಕರು ಲೈನ್ ಮನೆಗೆ ತೆರಳಿ ಕಾರ್ಮಿಕರಿಗೆ ವಾರದ ಕೂಲಿ ಮುಂಗಡ ಹಣವನ್ನು ನೀಡಿ ಹಿಂದುರುಗುತ್ತಾರೆ. ಅಂದು ಕಾರ್ಮಿಕರಾದ ಬೊಳಕ, ರಘು ಮತ್ತು ಅಯ್ಯಪ್ಪ ಮೂವರು ತೋಟಕ್ಕೆ ಹೊಂದಿಕೊಂಡಿರುವ ತೋಡಿನಲ್ಲಿ ಮೀನು ಹಿಡಿಯಲು ತೆರಳುತ್ತಾರೆ. ಸಂಜೆಯ ವರೆಗೆ ಮೀನು ಹಿಡಿದು ಮನೆಗೆ ತೆರಳುತ್ತಾರೆ. ಬಳಿಕ ಮೀನು ಹಂಚಿಕೆ ಆರಂಭವಾಗುತ್ತದೆ, ಮೀನು ಹಂಚಿಕೆಯಾಗುತ್ತಿರುವ ಸಂದರ್ಭ ಅಯ್ಯಪ್ಪ ತಗಾದೆ ಎತ್ತುತ್ತಾನೆ. ಬೊಳಕ ಮತ್ತು ಅಯ್ಯಪ್ಪ ನಡುವೆ ವಾದ ವಿವಾದ ನಡೆಯುತ್ತದೆ. ಜಗಳವಾಗುತ್ತದೆ. ಈ ಮಧ್ಯೆ ಕುಪಿತಗೊಂಡ ಬೊಳಕ ಮನೆಯಲ್ಲಿದ್ದ ಕತ್ತಿಯಿಂದ ಅಯ್ಯಪ್ಪನ ಮೇಲೆ ಪ್ರಹಾರ ಮಾಡುತ್ತಾನೆ. ಅಯ್ಯಪ್ಪ ನ ಕಿವಿ, ತಲೆ ಭಾಗಕ್ಕೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ಮಾಡುತ್ತಾನೆ. ಪರಿಣಾಮ ದೇಹವೆಲ್ಲಾ ರಕ್ತಸಿಕ್ತವಾಗಿ ನೆಲಕ್ಕೆ ಕುಸಿದು ಬೀಳುತ್ತಾನೆ ಅಯ್ಯಪ್ಪ. ಈರ್ವರ ನಡುವೆ ನಡೆಯುತಿದ್ದ ಜಗಳ ಮತ್ತು ಅಯ್ಯಪ್ಪ ಗಾಯದಿಂದ ನರುಳುತಿರುವುದನ್ನು ಕಂಡ ಕಾರ್ಮಿಕ ರಘು ಅನತಿ ದೂರದಲ್ಲಿರುವ ಮಾಲೀಕರ ಮನೆಗೆ ಬಂದು ತಿಳಿಸುತ್ತಾನೆ. ಮಾಲೀಕರು ತಕ್ಷಣವೇ ರಾತ್ರಿ ಹೊತ್ತಿನಲ್ಲಿ ಲೈನ್ ಮನೆಗೆ ಆಗಮಿಸಿ ಗಾಯಗೊಂಡಿರುವ ಅಯ್ಯಪ್ಪನನ್ನು ತಮ್ಮ ವಾಹನದಲ್ಲಿ ಕುಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ. ವೈದ್ಯರು ಗೋಣಿಕೊಪ್ಪಕ್ಕೆ ತೆರಳಲು ಸೂಚಿಸುತ್ತಾರೆ. ಗೊಣಿಕೊಪ್ಪದ ವೈದ್ಯರು ವಿರಾಜಪೇಟೆ ಗೆ ತೆರಳಲು ಸೂಚಿಸುತ್ತಾರೆ. ವಿರಾಜಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ತೆರಳಲು ಸೂಚಿಸುತ್ತಾರೆ. ಮೈಸೂರು ತೆರಳುವ ಮಾರ್ಗ ಗೋಣಿಕೊಪ್ಪಲು ಆರ್.ಎಂ.ಸಿ ಬಳಿ ಸುಮಾರು ಮುಂಜಾನೆಯ 4 ರ ಸಮಯದಲ್ಲಿ ಅಯ್ಯಪ್ಪ ಮೃತನಾಗುತ್ತಾನೆ. ತೋಟದ ಮಾಲೀಕರು ಘಟನೆಯ ಬಗ್ಗೆ ಕುಟ್ಟ ಪೊಲೀಸು ಠಾಣೆಯಲ್ಲಿ ತಾ. 24/03/2021 ರಂದು ದೂರು ದಾಖಲಿಸುತ್ತಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿ ಪಣಿಎರವರ ಬೊಳಕ ನ ಮೇಲೆ ಐ.ಪಿ.ಸಿ 302 ಅನ್ವಯ ಪ್ರಕರಣ ದಾಖಲಿಸಿ ಬಂಧಿಸಿ ಕಾರಗೃಹಕ್ಕೆ ಅಟ್ಟುತ್ತಾರೆ. ತನಿಖೆ ನಡೆಸಿದ ಕುಟ್ಟ ವೃತ್ತ ನರೀಕ್ಷಕರಾದ ಪರಶಿವಮೂರ್ತಿ ಅವರು ತಾ.25/05/2021 ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುತ್ತಾರೆ.

ವಿರಾಜಪೇಟೆ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುಧೀರ್ಘ ನಾಲ್ಕು ವರ್ಷ ವಿಚಾರಣೆ ನಡೆಯುತ್ತದೆ. ವಿಚಾರಣೆ ಬಳಿಕ ನ್ಯಾಯಾಲಯವು ದಿನಾಂಕ 04/07/2025 ರಂದು ತನ್ನ ಅಂತಿಮ ತೀರ್ಪು ಪ್ರಕಟಿಸುತ್ತದೆ. ದಿನಾಂಕ 07/07/2025 ರಂದು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆ ಗೌ. ನ್ಯಾಯಾಧೀಶರಾದ ಎಸ್. ನಟರಾಜು ಅವರು ಆರೋಪಿಯ ಕೃತ್ಯ ಸಾಭಿತಾದ ಹಿನ್ನಲೆಯಲ್ಲಿ ಕಲಂ 302 ರ ಅನ್ವಯ ಆರೋಪಿ ಪಣಿಎರವರ ಬೊಳಕ ಜೀವಾವದಿ ಕಠೀಣ ಕಾರಗೃಹ ಶಿಕ್ಷೆ ಮತ್ತು 25,000 ರೂ ದಂಡ ವಿಧಿಸಿದ್ದಾರೆ. 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ಅವರು ವಾದ ಮಂಡಿಸಿದ್ದರು.