ಅಭಿವೃದ್ಧಿಗೆ ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರೂ ಕೈಜೋಡಿಸಿ ; ಡಾ. ಮಂತರ್ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ:

ಮಡಿಕೇರಿ: ಸಮಾಜದ ಹಿತದೃಷ್ಟಿಯಿಂದ ಜನಪ್ರತಿನಿಧಿಗಳೊಂದಿಗೆ ಪತ್ರಕರ್ತರು ಕೂಡಾ ಕೈಜೋಡಿಸಿ ಶ್ರೀಸಾಮಾನ್ಯರಿಗೆ ನ್ಯಾಯ ಕೊಡಿಸುವಲ್ಲಿ ಸಹಕಾರ ನೀಡಬೇಕೆಂದು, ಮಡಿಕೇರಿಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಡಾ ಮಂತರ್ ಮಾತನಾಡಿದರು.ಸೋಮವಾರಪೇಟೆಯ ಮಹಾದಾನಿಯಾಗಿದ್ದ ತಮ್ಮ ಅಜ್ಜಿ ಸಾಕಮ್ಮ ಅವರನ್ನು ಸ್ಮರಿಸಿಕೊಂಡ ಡಾ ಮಂತರ್, ಸಾಕಮ್ಮ ಜನರಿಗಾಗಿ ದಾನ ಮಾಡಿದರೆ, ರಾಜಕಾರಣಿಗಳು ಜನಪ್ರಿಯತೆಗಾಗಿ ದಾನ ಮಾಡುತ್ತಾರೆ ಎಂದು ಹಾಸ್ಯವಾಗಿ ಹೇಳಿದರು. ಇದೇ ಸಂದರ್ಭ ಡಾ ಮಂತರ್ ತಮ್ಮ ಅಜ್ಜಿ ಸಾಕಮ್ಮ ಜ್ಞಾಪಕಾರ್ಥ ಸಂಘದಲ್ಲಿ ಎರಡು ದತ್ತಿನಿಧಿ ಸ್ಥಾಪಿಸುವುದಾಗಿ ಘೋಷಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯಾವುದೇ ಪ್ರಶಸ್ತಿಗಳು ನಮ್ಮ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾಗುತ್ತವೆ ಎಂದರು. ಡಾ ಮಂಥರ್ ಸ್ಥಾಪಿಸಲು ಉದ್ದೇಶಿಸಿದರುವ ದತ್ತಿನಿಧಿಯನ್ನು ಕಾಫಿ ಉದ್ಯಮಕ್ಕೆ ಸಂಬಂಧಿಸಿದ ಉತ್ತಮ ವರದಿಗೆ ನೀಡುವಂತಾಗಬೇಕೆಂದು ಕುಟ್ಟಪ್ಪ ಅಭಿಪ್ರಾಯ ಮಂಡಿಸಿದರು.
ಪತ್ರಕರ್ತರಿಗೆ ಸರ್ಕಾರದಿಂದ ನಿವೇಶನ ಕೊಡಿಸಲು ಪ್ರಯತ್ನಿಸಿ ಎಂದು, ಸಂಘದ ಕಾನೂನು ಸಲಹೆಗಾರ ಮತ್ತು ವಕೀಲ ಪಿ.ಕಷ್ಣಮೂರ್ತಿ ಶಾಸಕರನ್ನು ವಿನಂತಿಸಿದರು. ಪತ್ರಕರ್ತರಿಗೆ ಸರ್ಕಾರದ ಯಾವುದೇ ಸೌಲಭ್ಯ ಕೊಡಿಸುವ ಸಂದರ್ಭ ಸಂಘದ ಅಧ್ಯಕ್ಷರನ್ನು ಪರಿಗಣನೆಗೆ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು. ಸಂಘದ ಅಧ್ಯಕ್ಷರು ಸದಸ್ಯರ ಯಾವುದೇ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದನೆ ನೀಡುತ್ತಿರುವುದು ಮತ್ತು ಮಾಧ್ಯಮ ಸ್ಪಂದನದ ಮೂಲಕ ಪತ್ರಕರ್ತರು ಸಮಾಜಕ್ಕೆ ಸ್ಪಂದನೆ ನೀಡುತ್ತಿರುವುದು ಮಾದರಿ ಎಂದರು.ಸ
ಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ವಹಿಸಿದ್ದರು.ರಾಜ್ಯ ಸಮಿತಿ ನಿರ್ದೆಶಕ ಟಿ ಎನ್ ಮಂಜುನಾಥ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಜರಿದ್ದರು.ನಿರ್ದೇಶಕ ಹೆಚ್.ಕೆ. ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಚೆನ್ನನಾಯಕ್ ಪ್ರಾರ್ಥಿಸಿ, ಪ್ರಶಸ್ತಿ ವಿಜೇತರ ಪಟ್ಟಿ ಓದಿದರು,ಉಪಾಧ್ಯಕ್ಷ ಪಾರ್ಥ ಚಿನ್ನಪ್ಪ ವಂದಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಮಹದೇವಪ್ಪ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ ಪ್ರಾಯೋಜಕತ್ವ ನೀಡಿದ್ದರು.