ಕೊಡಗು ಪತ್ರಕತ೯ರ ಸಂಘದಿಂದ ಮಡಿಕೇರಿಯಲ್ಲಿ ಅಭಿವಂದನಾ ದೀಪಾ ಪೌರಸನ್ಮಾನ : 51 ಸಂಸ್ಥೆಗಳಿಂದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿಗೆ ಗೌರವಾಪ೯ಣೆ ಬೂಕರ್ ಪ್ರಶಸ್ತಿಯ ಮೂಲಕ ಕೊಡಗಿನ ಸಾಹಿತ್ಯ ಲೋಕ ವಿಜೖಂಭಿಸುವಂತಾಗಿದೆ: ಡಾ.ಮಂತರ್ ಗೌಡ

ಮಡಿಕೇರಿ: ಹಾಟ್೯ ಲ್ಯಾಂಪ್ ಆಂಗ್ಲ ಅನುವಾದಿತ ಕೃತಿಯ ಮೂಲಕ 'ಕನ್ನಡ' ಸಾಹಿತ್ಯಿದ ಅಂತಃಶಕ್ತಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿ ಬೂಕರ್ ಪ್ರಶಸ್ತಿಯ ಹಿರಿಮೆಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡ ಕೊಡಗಿನ ಕುವರಿ ದೀಪಾಭಾಸ್ತಿ ಅವರಿಗೆ ಕೊಡಗು ಪತ್ರಕರ್ತರ ಸಂಘ (ರಿ)ದ ವತಿಯಿಂದ ಆಯೋಜಿತ ಅಭಿವಂದನಾ ದೀಪಾ' ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂಘಟನೆಗಳು ಅಭಿಮಾನ ಪೂರ್ವಕವಾದ ಗೌರವವನ್ನು ಅಪಿ೯ಸಿ ಸಂಭ್ರಮಿಸಿದವು.ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತ 'ಅಭಿವಂದನಾ ದೀಪ' ಎಂಬ ವಿಶಿಷ್ಟ ಪೌರ ಸನ್ಮಾನ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಭಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಇಂಗಲೀಷ್‌ಗೆ 'ಹಾರ್ಟ್ ಲ್ಯಾಂಪ್' ಆಗಿ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ದೀಪಾ ಭಾಸ್ತಿ ಅವರು ಪಡೆದಿರುವುದು ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ. ಇಂತಹ ಸಾಧನೆಯ ಮೂಲಕ ದೀಪಾ ಭಾಸ್ತಿ ಅವರು ಕೊಡಗಿಗೆ ಹೆಮ್ಮೆಯನ್ನು ತಂದಿದ್ದಾರೆಂದು ಮಂತರ್ ಗೌಡ ಸಂತಸ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ಅನುವಾದದ ಮೂಲಕ ವಿಶ್ವದ ಅತ್ಯುನ್ನತ ಅನುವಾದ ಸಾಹಿತ್ಯ ಪ್ರಶಸ್ತಿ ಬೂಕರ್‌ನ್ನು ದೀಪಾ ಅವರು ಪಡೆಯುವ ಮೂಲಕ, ಇಡೀ ದೇಶದ ಯುವ ಸಮೂಹಕ್ಕೆ ಸಾಹಿತ್ಯಾಸಕ್ತಿ ಮೂಡಿಸಲು ಅವರು ಪ್ರೇರಣೆಯನ್ನು ನೀಡಿದ್ದಾರೆ. ಪ್ರಸ್ತುತ ಡಿಜಿಟಲ್ ಮಾಧ್ಯಮ, ಕಂಪ್ಯೂಟರ್‌ಗಳ ಆಳಕ್ಕೆ ಇಳಿದಿರುವ ನಮ್ಮ ತಿಳುವಳಿಕೆಯನನ್ನು ಅದರಿಂದ ಹೊರ ತಂದು, ಪುಸ್ತಕಗಳನ್ನು ಓದುವ, ಸಾಹಿತ್ಯದೆಡೆಗೆ ಆಸಕ್ತಿಯನ್ನು ಹೊಂದುವ ಮನಸ್ಥಿತಿಯನ್ನು ದೀಪಾ ಭಾಸ್ತಿ ಅವರು ತಮ್ಮ ಅನುವಾದ ಕೃತಿಯ ಮೂಲಕ ಮಾಡಿದ್ದಾರೆ ಎಂದೂ ಶಾಸಕ ಡಾ.ಮಂತರ್ ಗೌಡ ಮನದುಂಬಿ ನುಡಿದರು.'ಅಭಿವಂದನಾ ದೀಪಾ' ಎನ್ನುವ ಪೌರ ಸನ್ಮಾನದ ಮೂಲಕ ಪಕ್ಷ, ಜಾತಿ ಮತಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಅಪೂರ್ವವಾದ ಕಾರ್ಯವನ್ನು ಕೊಡಗು ಪತ್ರಕರ್ತರ ಸಂಘ ಮಾಡಿರುವುದನ್ನು ಶಾಸಕರು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಮಾತನಾಡಿ, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆದಿರುವುದು ಕೇವಲ ವ್ಯಕ್ತಿಯೊಬ್ಬರ ಸಾಧನೆಗೆ ಸೀಮಿತವಾಗುವುದಿಲ್ಲ. ಇವರ ಸಾಧನೆಯು ಈ ನೆಲದ ಭಾಷೆ, ಶ್ರೀಮಂತ ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ದೊರಕಿದಂತಾಗಿದ್ದು, ಇದೊಂದು ಅಪೂರ್ವ ಸಂದರ್ಭವೇ ಆಗಿದೆ. ದೀಪಾ ಭಾಸ್ತಿ ಅವರು ತಮ್ಮ ಈ ಸಾಧನೆಯ ಮೂಲಕ ಯುವ ಲೇಖಕರಿಗೆ ತಾವು ಏನನ್ನಾದರು ಸಾಧಿಸಬಹುದೆನ್ನುವ ನಂಬಿಕೆ ಮತ್ತು ವಿಶ್ವಾಸಗಳನ್ನು ಮೂಡಿಸಿದ್ದಾರೆಂದು ದೃಢವಾಗಿ ನುಡಿದರು.
ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಅವರು ಮಾತನಾಡಿ, ಕೊಡಗಿನ ಮಗಳು ದೀಪಾ ಭಾಸ್ತಿ ಅವರು ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವುದು ಮಡಿಕೇರಿಯ ಸವ೯ ಜನತೆಗೆ ಸಂಭ್ರಮವನ್ನು ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಮಹತ್ವಪೂರ್ಣ ಕೃತಿಗಳು ಹೊರ ಬರುವಂತಾಗಲೆಂದು ಹಾರೈಸಿದರು.
ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸೈನಿಕ ಪರಂಪರೆ, ಕ್ರೀಡಾ ಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಕೊಡಗು, ಸಾಹಿತ್ಯ ಕ್ಷೇತ್ರದಲ್ಲಿ ಹಿಂದಿದೆ ಎನ್ನುವ ಚಿಂತನೆಯನ್ನು, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ತೊಡೆದು ಹಾಕಿದ್ದಾರೆ. ಜಿಲ್ಲೆಯಲ್ಲಿ ದೀಪಾ ಭಾಸ್ತಿ ಅವರು ಸಾಹಿತ್ಯದ ದೀಪವನ್ನು ಬೆಳಗಿದ್ದಾರೆಂದು ಅತೀವ ಸಂತಸವನ್ನು ವ್ಯಕ್ತಪಡಿಸಿದರು.
ನಡಿಕೇರಿಯಂಡ ಚಿಣ್ಣಪ್ಪ ಅವರ 'ಪಟ್ಟೋಲೆ ಪಳಮೆ'ಕೃತಿ ಕೊಡಗಿನ ಪ್ರತಿ ಮನೆ ಮನೆಗಳಲ್ಲಿ ಇರಬೇಕಾದ ಪುಸ್ತಕವಾಗಿದ್ದು, ಇದೀಗ ದೀಪಾಭಾಸ್ತಿ ಅವರ ಅನುವಾದ ಕೃತಿ 'ಹಾರ್ಟ್ ಲ್ಯಾಂಪ್' ಎಲ್ಲರ ಮನೆಗಳಲ್ಲಿ ಇರಬೇಕೆಂದು ಅಭಿಮಾನದಿಂದ ನುಡಿದ ಮಹೇಶ್ ನಾಚಯ್ಯ, ಇಂತಹ ಒಂದು ಕಾರ್ಯಕ್ರಮದ ಮೂಲಕ ಕೊಡಗು ಶಾಂತಿಯ ತೋಟವೆನ್ನುವುದಕ್ಕೆ ಪೂರಕವಾಗಿ ಎಲ್ಲರೂ ಒಂದೆಡೆ ಸೇರುವಂತಾಗಿರುವುದು ಹರ್ಷದಾಯಕ ಎಂದೂ ಅವರು ನುಡಿದರು.
ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಅವರು ಮಾತನಾಡಿ, ಬೂಕರ್ ಪ್ರಶಸ್ತಿ ಎನ್ನುವುದು ಅನುವಾದ ಕೃತಿಗೆ ಇರುವ ವಿಶ್ವದ ಅತ್ಯುನ್ನತ ಪ್ರಶಸ್ತಿ. ಇದನ್ನು ಪಡೆಯುವ ಮೂಲಕ ದೀಪಾ ಭಾಸ್ತಿ ಅವರು ಕನ್ನಡ ಭಾಷಾ ಸಂಸ್ಕೃತಿಗೆ ವಿಶೇಷ ಗೌರವವನ್ನು ತಂದಿದ್ದಾರೆ. ಯಾವುದೇ ಒಂದು ಭಾಷೆಯ ಬೆಳವಣಿಗೆಗೆ ಅನುವಾದ ಕೃತಿಗಳ ಪಾತ್ರ ಅತ್ಯಂತ ಪ್ರಮುಖವಾದುದು. ಇತರೆ ಭಾಷೆಗಳಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳು ಅನುವಾದದ ಮೂಲಕ ನಮ್ಮ ಭಾಷೆಗೆ ಬಂದಾಗ ಭಾಷೆಯ ಬೆಳವಣಿಗೆ ಸಾಧ್ಯವಾಗುತ್ತದೆ. ಅಕಾಡೆಮಿಯಿಂದ 74 ಪುಸ್ತಕಗಳನ್ನು ಹೊರ ತರಲಾಗಿದ್ದು, ಇದರಲ್ಲಿ ಅನುವಾದ ಕೃತಿಗಳು ಇವೆ. ಇತರೆ ಭಾಷೆಗಳ ಸಾಹಿತ್ಯ ಕೃತಿಗಳು ಅರೆಭಾಷೆಗೆ ಅನುವಾದವಾಗಬೇಕಿದ್ದು, ಈ ನಿಟ್ಟಿನಲ್ಲಿ ಅಕಾಡೆಮಿ ಅನುವಾದ ಸಾಹಿತ್ಯಕ್ಕೆ ಒತ್ತು ನೀಡುತ್ತಿದೆಯೆಂದು ತಿಳಿಸಿದರು.
ಅನುವಾದವಿಲ್ಲದಿದ್ದರೆ ವಿಶ್ವದ ಜ್ಞಾನ ಬರಡಾದೀತು;
ಪೌರ ಸನ್ಮಾನ ಸ್ವೀಕರಿಸಿದ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರು ಮಾತನಾಡಿ, ವಿಶ್ವದ ಯಾವುದೇ ಭಾಷೆಯ ಉತ್ತಮ ಕೃತಿಗಳು ಅನುವಾದಗೊಂಡು ಇತರೆ ಭಾಷಿಕ ಜನರಿಗೆ ತಲುಪದಿದ್ದರೆ 'ವಿಶ್ವದ ಜ್ಞಾನ'ವೇ ಬರಡಾದೀತು. ಅನುವಾದಕರನ್ನು ಅಸಡ್ಡೆಯಿಂದ ಕಾಣುವ ಮನಸ್ಥಿತಿಯನ್ನು ಹೊರ ಬಂದು, ಅನುವಾದ ಸಾಹಿತ್ಯದ ಮಹತ್ವವನ್ನು ಅರಿತು ಅನುವಾದಕರನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆಯೆಂದು ತಿಳಿಸಿದರು.
ಓದುಗರಲ್ಲಿ ಅನುವಾದಕರ ಬಗ್ಗೆ ಇರುವ ಅಸಡ್ಡೆಯನ್ನು ತಾನು ಗಮನಿಸಿದ್ದೇನೆ. ಅನುವಾದವೆಂದರೆ ಒಂದು ಕೃತಿಯನ್ನು ಮತ್ತೊಂದು ಭಾಷೆಗೆ ತರ್ಜುಮೆ ಮಾಡುವುದಷ್ಟೆ. ಅದೊಂದು ದೊಡ್ಡ ವಿಷಯವಲ್ಲ ಎನ್ನುವ ಭಾವನೆಗಳಿವೆ. ಇಂತಹ ಮನಸ್ಥಿತಿಯಿಂದ ನಾವು ಹೊರ ಬರಬೇಕಾಗಿದೆ. ಅನುವಾದವೆನ್ನುವುದು ಒಂದು ಪದವನ್ನು ಮತ್ತು ಭಾಷೆಯ ಪದಕ್ಕೆ ತರ್ಜುಮೆ ಮಾಡುವುದಲ್ಲ. ಪದ ಪದಗಳ ತರ್ಜುಮೆ ಎಂದಿಗೂ ಒಳ್ಳೆಯ ಅನುವಾದವಾಗಲಾರದೆಂದು ಸ್ಪಷ್ಟ ಪಡಿಸಿದರು.
ನಾವು ಮಾತನಾಡುವ ಭಾಷೆ ಕೇವಲ ಪರಸ್ಪರ ಸಂವಹನಕ್ಕೆ ಇರುವ ಮಾಧ್ಯಮ ಮಾತ್ರವಲ್ಲ. ಬಳಕೆಯ ಭಾಷೆ ಈ ನೆಲದ ಸಂಸ್ಕೃತಿ, ಆಹಾರ ಪದ್ಧತಿ ಪರಂಪರೆಗಳ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತದೆ. ಯಾವುದೇ ಒಂದು ಭಾಷೆಯ 'ಪದ' ಅಲ್ಲಿನ ಭೌಗೋಳಿಕ ಪರಿಸರದ ಸಂಬಂಧಗಳನ್ನು ತನ್ನೊಳಗೆ ಮಿಳಿತಗೊಳಿಸಿಕೊಂಡಿರುತ್ತದೆ. ಇಂತಹ ಪದವನ್ನು ಅನುವಾದದ ಸಂದರ್ಭ ಆ ಭಾಷೆಯಲ್ಲಿ ಮೂಡಿಸುವ, ಅರ್ಥ ವ್ಯತ್ಯಾಸವಾಗದಂತೆ ಅನುವಾದ ಕೃತಿಯಲ್ಲಿ ತರುವುದು ಸುಲಭದ ಮಾತಲ್ಲ. ತಾನು ಇದೀಗ ಕೈಗೆತ್ತಿಕೊಂಡಿರುವ ಶಿವಮೊಗ್ಗದ ಸಾಹಿತಿ ಸಮುದ್ಯತಾ ಅವರ ' ಇದೇ ಅಂದರೆ ಇದೆ, ಇಲ್ಲ ಅಂದರೆ ಇಲ್ಲ' ಎನ್ನುವ ಕೃತಿಯಲ್ಲಿ ಬರುವ ಕನ್ನಡದ ಸುಂದರ ಪದ 'ಗೋಧೂಳಿ' ಎನ್ನುವುದಕ್ಕೆ ಇಂಗಲೀಷ್‌ನಲ್ಲಿ ಸೂಕ್ತ ಪದ ದೊರಕಿಲ್ಲ. ಇದಕ್ಕೆ ಸರಿಸಮಾನವಾದ ಪದ ಇದ್ದರೆ ತಿಳಿಸಿ ಎಂದು ದೀಪಾಭಾಸ್ತಿ ವಿನಂತಿಸಿಕೊಂಡರು.ಪ್ರಸ್ತುತ ಕಂಡು ಬರುವ ಗೂಗಲ್ ಅನುವಾದಗಳು ಎಂದಿಗೂ ಉತ್ತಮ ಅನುವಾದ ಕ್ರಿಯೆ ಅಲ್ಲವೆಂದು ದೀಪಾಭಾಸ್ತಿ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, 'ಬೂಕರ್ ಪ್ರಶಸ್ತಿ' ಅನುವಾದ ಸಾಹಿತ್ಯಕ್ಕಾಗಿಯೇ ಮೀಸಲಾಗಿರುವ ಪ್ರಶಸ್ತಿ. ಈ ಬಾರಿ ಪ್ರಶಸ್ತಿಗಾಗಿ ವಿಶ್ವದ ವಿವಿಧೆಡೆಗಳ 153 ಕೃತಿಗಳು ದಾಖಲಾಗಿತ್ತು. ಇದರಲ್ಲಿ ಅಂತಿಮ 6 ಕೃತಿಗಳಲ್ಲಿ ಒಂದಾಗಿ ಅಂತಿಮ ಹಂತ ಪ್ರವೇಶಿಸಿದ ದೀಪಾ ಭಾಸ್ತಿ ಅವರ 'ಹಾರ್ಟ್ ಲ್ಯಾಂಪ್' ಕೃತಿಯೊಂದಿಗೆ ಡ್ಯಾನಿಷ್ ಸೇರಿದಂತೆ ವಿವಿಧ ಭಾಷೆಗಳ ಅನುವಾದ ಕೃತಿಗಳಿದ್ದವು. ಇದರಲ್ಲಿ ಅಂತಿಮವಾಗಿ ಹಾರ್ಟ್ ಲ್ಯಾಂಪ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದೀಪಾ ಭಾಸ್ತಿ ಕೊಡಗು ಸೇರಿದಂತೆ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ ಎಂದರು.
ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನದ 13 ಕಥೆಗಳನ್ನು ದೀಪಾ ಭಾಸ್ತಿ ಅವರು ಅನುವಾದ ಮಾಡಿದ್ದಾರೆ. ಇದಕ್ಕಾಗಿ ಅವರು ಮೂರು ವರ್ಷಗಳ ಸತತ ಪರಿಶ್ರಮ ಪಟ್ಟಿರುವುದನ್ನು ಸ್ಮರಿಸಿದ ಅನಿಲ್, ಇವರ ಪರಿಶ್ರಮಕ್ಕೆ 'ಬೂಕರ್ ಪ್ರಶಸ್ತಿ' ಒಲಿದು ಬರುವ ಮೂಲಕ ಕನ್ನಡ ಸಾಹಿತ್ಯದ ಪಥ ಬದಲಾಗಿದೆ. ವಿಶ್ವ ಮಟ್ಟದಲ್ಲಿ ಕತ್ತಲಲ್ಲಿದ್ದ ಕನ್ನಡ ಸಾಹಿತ್ಯವನ್ನು ದೀಪಾ ಭಾಸ್ತಿ ಅವರ ಬೂಕರ್ ಪ್ರಶಸ್ತಿ ಬೆಳಕಿಗೆ ತಂದಿದೆಯೆಂದು ಅನಿಲ್ ಸಂತಸ ವ್ಯಕ್ತಪಡಿಸಿದರು.
ಮೂಲ ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಅವರು ವಿಭಿನ್ನ ಸಂಸ್ಕೃತಿ, ವಿಭಿನ್ನ ಭೌಗೋಳಿಕ ಪರಿಸರದಿಂದ ಬಂದವರು. ಇವರು ಬೂಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದು ಸಾಮರಸ್ಯದ ಸಂಕೇತವಾಗಿ ಮೂಡಿ ಬಂದಿದ್ದಾರೆ. ಆ ಮೂಲಕ ಕನ್ನಡಿಗರೆಲ್ಲರ ಹೃದಯದಲ್ಲಿ ಅಭಿಮಾನದ ದೀಪ ಬೆಳಗಿರುವುದಾಗಿ ಅನಿಲ್ ಹೆಚ್.ಟಿ. ಮೆಚ್ಚುಗೆಯ ನುಡಿಗಳನ್ನಾಡಿದರು.
ಪ್ರತಿಭಾ ಮಧುಕರ್ ಜಗವ ಬೆಳಗಲಿ ದೀಪಾ ಎಂದು ಅಥ೯ಪೂಣ೯ವಾಗಿ ಪ್ರಾರ್ಥಿಸಿದ ಕಾಯ೯ಕ್ರಮವನ್ನು ಜಿಲ್ಲಾ ಜಾನಪದ ಪರಿಷತ್ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ನಿರೂಪಿಸಿದರು. ದೀಪಾ ಭಾಸ್ತಿ ಅವರ ಪರಿಚಯವನ್ನು ವಿನೋದ್ ಮೂಡಗದ್ದೆ ಸಭಿಕರಿಗೆ ಮಾಡಿಕೊಟ್ಟರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು. ಸಾಹಿತ್ಯಾಸಕ್ತರಿಂದ ಸಭಾಂಗಣ ಕಿಕ್ಕಿರಿದದ್ದು ವಿಶೇಷವಾಗಿತ್ತು.
51 ಸಂಘ ಸಂಸ್ಥೆಗಳಿಂದ ಪೌರಸನ್ಮಾನ!
ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತ 'ಅಭಿವಂದನಾ ದೀಪಾ' ಪೌರ ಸನ್ಮಾನ ಕಾರ್ಯಕ್ರಮದಲ್ಲಿ 51 ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದ ವಿಶೇಷ. ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಇಷ್ಟೊಂದು ಸಂಖ್ಯೆಯ ಸಂಘಸಂಸ್ಥೆಗಳಿಂದ ಪೌರಸನ್ಮಾನ ನಡೆದ ಹೆಗ್ಗಳಿಕೆಗೆ ಕಾಯ೯ಕ್ರಮ ಪಾತ್ರವಾಯಿತು.
ಸನ್ಮಾನಿಸಿದ ಸಂಘಸಂಸ್ಥೆಗಳು- ಮಡಿಕೇರಿ ನಗರಸಭೆ, ಮಡಿಕೇರಿ ವಕೀಲರ ಸಂಘ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯, ಕೊಡಗು ಹೋಟೇಲ್, ರೆಸಾಟ್೯ ಅಸೋಸಿಯೇಷನ್, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರ, ,ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ,
ಕೊಡಗು ವಿದ್ಯಾಲಯ. ಮಡಿಕೇರಿ,, ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿ ಕೊಡಗು, ಕೊಡವ ಸಮಾಜ, ಮಡಿಕೇರಿ ,,ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮಸ್೯, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೊಡಗು, ಭಾರತೀಯ ಜನತಾ ಪಾಟಿ೯,ಕೊಡಗು, ಜಾತ್ಯಾತೀತ ಜನತಾ ದಳ. ಕೊಡಗು,ಪೊಮ್ಮಕ್ಕಡ ಕೂಟ ಮಡಿಕೇರಿ , ಪೊಮ್ಮಕ್ಕಡ ಕೂಟ ವೀರಾಜಪೇಟೆ,,ಲಯನ್ಸ್ ಕ್ಲಬ್ ಮಡಿಕೇರಿ.ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್,, ರೋಟರಿ ಮಡಿಕೇರಿ ವುಡ್ಸ್, ,ಇನ್ನರ್ ವೀಲ್ ಮಡಿಕೇರಿ, ಭಾರತೀಯ ರೆಡ್ ಕ್ರಾಸ್, ಕೊಡಗು ಘಟಕ, ಮಡಿಕೇರಿ,ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಮಡಿಕೇರಿ , ಕೊಡಗು ಜಿ್ಲ್ಲಾ ಕುಲಾಲ ಸಮಾಜ ಮಡಿಕೇರಿ, ಹಿಂದೂ ಮಲಯಾಳಿ ಸಂಘ, ಮಡಿಕೇರಿ,ಕೊಡಗು ಬಿಲ್ಲವ ಸಮಾಜ ಮಡಿಕೇರಿ, ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ, ಕೊಡಗು ಜಿಲ್ಲಾ ಮೊಗೇರ ಸಮಾಜ, ಮಡಿಕೇರಿ. , ಭಾರತೀಯ ಮೆಡಿಕಲ್ ಅಸೋಸಿಯೇಷನ್, ಕೊಡಗು ಶಾಖೆ,, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ , ಮಡಿಕೇರಿ, ಕೊಡಗು ದಲಿತ ಸಂಘಷ೯ ಸಮಿತಿ , ಬ್ಯಾರಿ ವೆಲ್ಪೇರ್ ಟ್ರಸ್ಟ್ ಮಡಿಕೇರಿ, ಕೊಡಗು ಕ್ರೈಸ್ತರ ಸೇವಾ ಸಂಘ ಮಡಿಕೇರಿ., ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕೊಡಗು, ವೀರಶೈವ ಸಮಾಜ, ಮಡಿಕೇರಿ, ಕೊಡಗು ಜಿಲ್ಲಾ ಜಮಾತ್ ಎ ಇಸ್ಲಾಂ ಹಿಂದ್, ಗೌಡ ಮಹಿಳಾ ಒಕ್ಕೂಟ, ಚೇರಂಬಾಣೆ, ಸಮಥ೯ ಕನ್ನಡಿಗರು ಸಂಸ್ಥೆ, ಮಡಿಕೇರಿ, ಕನ್ನಡ ಸಿರಿ ಸ್ನೇಹಬಳಗ, ಕುಶಾಲನಗರ, ಸಂಸ್ಕೖತಿ ಸಿರಿ ಬಳಗ ಟ್ರಸ್ಟ್, ಕೊಡಗು, ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟ, ಮಡಿಕೇರಿ