ಮಾಧ್ಯಮ ಹೊಸತನ ಅರ್ಪಿಸಿಕೊಳ್ಳಲು ಮುಂದಾಗಬೇಕಿದೆ: ಕೊಟ್ಟುಕತ್ತೀರ ಪಿ.ಸೋಮಣ್ಣ: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಗೋಣಿಕೊಪ್ಪ:ಮಾಧ್ಯಮ ಹೊಸತನ ಅರ್ಪಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತೀರ ಪಿ. ಸೋಮಣ್ಣ ಹೇಳಿದರು.
ಹಾತೂರು ಐಮರ ಸಭಾಂಗದಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಹಾಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮ ಹೊಸತನ ನೀಡುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣ ಎಲ್ಲವನ್ನೂ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವಾಗ ಹೊಸತನ ನೀಡಲು ಮುಂದಾಗಬೇಕಿದೆ ಎಂದರು. ಕಲಾತ್ಮಕತೆ ಅವಶ್ಯ. ಕತ್ತಿಯ ಮೇಲೆ ನಡಿಗೆಯಲ್ಲಿ ಪತ್ರಕರ್ತರು ನಡೆಯುತ್ತಿದ್ದಾರೆ. ತನಿಖಾ ವರದಿಯಿಂದ ಸಾಕಷ್ಟು ಕಾನೂನು ಎದುರಿಸುವ ಕಾಲ ಅನಿವಾರ್ಯವಾಗುತ್ತಿದೆ. ಇದರಿಂದಾಗಿ ತನಿಕಾ ವರದಿಗಳು ಕ್ಷೀಣಿಸುತ್ತಿದೆ ಎಂದರು. ಇಂದು ಮಾಧ್ಯಮಗಳು ಹೆಚ್ಚಾಗಿ ಜನರಿಗೆ ತಲುಪುವ ಹಂತದಲ್ಲಿದೆ. ಪತ್ರಿಕೆ ಓದುವವರೆಗೂ ಕಾಯುವ ಅನಿವಾರ್ಯತೆ ಇಲ್ಲದಿದ್ದರೂ, ಪತ್ರಿಕೆಯ ಹೊಣೆಗಾರಿಕೆಯಿಂದ ನಿಷ್ಪಕ್ಷಪಾತದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದು ಸಮಾಜಕ್ಕೆ ಅವಶ್ಯ ಎಂದರು.
ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಮಾತನಾಡಿ, ದೇಶದಲ್ಲಿ ಅಸ್ಪಶ್ಯತೆ ನೀಗಲು ಕೂಡ ಮಾಧ್ಯಮದ ಕೊಡುಗೆ ಹೆಚ್ಚಾಗಿದೆ. ದೇಶ ಕಾನೂನು ಜನರಿಗೆ ಮುಟ್ಟಿಸುವ ಮಾಧ್ಯಮದ ಜವಾಬ್ದಾರಿ ಸಮಾಜಕ್ಕೆ ನೆರವಾಗುತ್ತಿದೆ ಎಂದರು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮಾಡುವ ಕಾರ್ಯವನ್ನು ಪತ್ರಿಕಾ ರಂಗ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತಿದೆ. ಮಾಧ್ಯಮ ಇಲ್ಲದೆ ಪ್ರಜಾಪ್ರಭುತ್ವ ನಿರೀಕ್ಷಿಸುವುದು ಅಸಾಧ್ಯ. ಮಾಧ್ಯಮ ಕ್ಷೀಣಿಸಿದಷ್ಟು ಪ್ರಜಾಪ್ರಭುತ್ವ ಕೂಡ ಮಹತ್ವ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಂಘಟನೆಗೆ ಎಲ್ಲರ ಸಹಕಾರ ಅಗತ್ಯ. ಸಂಘಟನೆ ಬಲವರ್ಧನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ವಿಶೇಷ ವರದಿಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲು ಮುಂದಾಗಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರಲ್ಲಿ ವಿಶೇಷ ವರದಿಗಳ ಬಗ್ಗೆ ಬೆಳಕು ಚೆಲ್ಲುವ ತುಡಿತ ಕಡಿಮೆಯಾಗುತ್ತಿದೆ. ಸುದ್ದಿಯ ಮೂಲ ವಿಶೇಷವಾಗಿ ಬಿಂಬಿಸಲು ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮ ಸಂಚಾಲಕ ಸಿಂಗಿ ಸಿತೀಶ್ ಮತ್ತಷ್ಟು ಕಾರ್ಯಕ್ರಮದ ಮೂಲಕ ಸಂಘ ಬಲವರ್ಧನೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಪಡೆದ ಅಣ್ಣೀರ ಹರೀಶ್ ಮಾದಪ್ಪ, ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ ಹಾಗೂ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿ ಪಡೆದ ಪಡೆದ ಜಗದೀಶ್ ಜೋಡುಬೀಟಿ ಪ್ರಶಸಿ ಸ್ವೀಕರಿಸಿದರು. ಎಂ. ಎಂ. ಚನ್ನನಾಯಕ ನಿರೂಪಿಸಿದರು.
ಮಹಾಸಭೆ : ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಕಾರ್ಯದರ್ಶಿ ಮಂಡೇಡ ಅಶೋಕ್ ಮಹಾಸಭೆ ವರದಿ ಮತ್ತು ವಾರ್ಷಿಕ ವರದಿ ವಾಚಿಸಿ ಅನುಮೋದನೆ ಪಡೆದುಕೊಂಡಿರು. ಖಜಾಂಚಿ ವಿ.ವಿ. ಅರುಣ್ ಕುಮಾರ್ ಲೆಕ್ಕಪತ್ರ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಯಿತು. ವೀಕ್ಷಕರಾಗಿ ಉಕ್ಕೇರಿಯಂಡ ವಿಶ್ಮಾ ಪೆಮ್ಮಯ್ಯ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಎನ್. ಎನ್ ದಿನೇಶ್, ಉಪಾಧ್ಯಕ್ಷ ಮಚ್ಚಮಾಡ ಅನಿಶ್ ಮಾದಪ್ಪ, ಉಳಿದಂತೆ ಕುಪ್ಪಂಡ ದತ್ತಾತ್ರಿ, ಎಚ್. ಕೆ. ಜಗದೀಶ್, ಮನೋಜ್‌ಕುಮಾರ್ ಇದ್ದರು.ನಿರ್ದೇಶಕ ಚಿಮ್ಮಣಮಾಡ ದರ್ಶನ್ ದೇವಯ್ಯ ವಂದಿಸಿದರು. ಜಗದೀಶ್ ಜೋಡುಬೀಟಿ ಸ್ವಾಗತಿಸಿದರು.