ಪೊನ್ನಂಪೇಟೆ:ಕಾಡಾನೆಗಳ ದಾಂಧಲೆಗೆ ಗ್ರಾಮಸ್ಥರ ಪರದಾಟ: ಕಾಡಾನೆಗಳನ್ನು ಕಾಡಿಗಟ್ಟುವಂತೆ ಆಗ್ರಹ

ಪೊನ್ನಂಪೇಟೆ:ಕಾಡಾನೆಗಳ ದಾಂಧಲೆಗೆ ಗ್ರಾಮಸ್ಥರ ಪರದಾಟ:  ಕಾಡಾನೆಗಳನ್ನು ಕಾಡಿಗಟ್ಟುವಂತೆ ಆಗ್ರಹ
ಪೊನ್ನಂಪೇಟೆ:ಕಾಡಾನೆಗಳ ದಾಂಧಲೆಗೆ ಗ್ರಾಮಸ್ಥರ ಪರದಾಟ:  ಕಾಡಾನೆಗಳನ್ನು ಕಾಡಿಗಟ್ಟುವಂತೆ ಆಗ್ರಹ

ಪೊನ್ನಂಪೇಟೆ: ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು, ಕಿರುಗೂರು ಗ್ರಾಮದಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಕೃಷಿ ಫಸಲುಗಳನ್ನು ನಾಶಪಡಿಸಿವೆ. ಸುಮಾರು ಹತ್ತು-ಹನ್ನೆರಡು ವರ್ಷಗಳಿಂದ ನಿರಂತರವಾಗಿ ಮಳೆಗಾಲದಲ್ಲಿ ಮತ್ತೂರು, ಕಿರುಗೂರು ಗ್ರಾಮಕ್ಕೆ 8 ರಿಂದ 10 ಕಾಡಾನೆಗಳ ಹಿಂಡು ಲಗ್ಗೆಯಿಡುವುದಲ್ಲದೇ, ಶುಕ್ರವಾರದಂದು ಕಾಡಾನೆಗಳ ಹಿಂಡು ಮತ್ತೂರು ಗ್ರಾಮದ ಕಾಕೇರ ರವಿ ಎಂಬುವರಿಗೆ ಸೇರಿದ 20ರಿಂದ 25 ಫಸಲು ಬಂದ ಕಾಫಿ, 15 ರಿಂದ 20 ಫಸಲು ಬಂದ ಅಡಿಕೆ, ಹಾಗೂ ತೆಂಗು, ಬಾಳೆ ಹಾಗೂ ಇನ್ನಿತರ ಬೆಳೆಗಳನ್ನು ನಾಶಪಡಿಸಿವೆ. ಅಲ್ಲದೆ ಗ್ರಾಮದ ಕಾಕೇರ ನಾಣಯ್ಯ, ಪಿ.ಎನ್ ರುಕ್ಮಿಣಿ, ಪುತ್ತಮನೆ ಸ್ವರಣ್, ಚೆಪ್ಪುಡಿರ ನಟೇಶ್, ಕಾಳಪ್ಪ, ಹಾಗೂ ಇತರರ ಕಾಫಿ ತೋಟಗಳು ಕಾಡಾನೆಗಳ ದಾಂಗುಡಿಗೆ ನಾಶವಾಗಿವೆ. ಕಳೆದ ಹದಿನೈದು ದಿನಗಳಿಂದ ಮತ್ತೂರು, ಕಿರುಗೂರು ಗ್ರಾಮದಲ್ಲೆ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಗ್ರಾಮದ ಕೃಷಿ ಪ್ರದೇಶಗಳಲ್ಲಿ ದಾಂಧಲೆ ನಡೆಸುತ್ತಿವೆ.ಕಾಡಾನೆಗಳಿಂದ ಒಂದು ಕಡೆ ಕೃಷಿಫಸಲು ನಾಶವಾಗುತ್ತಿದ್ದರೇ, ಮತ್ತೊಂದೆಡೆ ಸಂಜೆ ವೇಳೆ ಗ್ರಾಮಸ್ಥರು ಮನೆಗಳಿಂದ ಹೊರಕ್ಕೆ ಬರಲು ಸಹ ಭಯಪಡುವಂತ ವಾತಾವರಣ ಸೃಷ್ಟಿಯಾಗಿದೆ.

 ಮತ್ತೂರು ಗ್ರಾಮಸ್ಥರಾದ ಕಾಕೇರ ರವಿ ಅವರು ಮಾತನಾಡಿ, ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಮತ್ತೂರು ಮತ್ತು ಕಿರುಗೂರು ಗ್ರಾಮಗಳಲ್ಲಿ ಸತತವಾಗಿ ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಮಾಡಿದಾಗ ಪೊನ್ನಂಪೇಟೆ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕೀರೆ ಹೊಳೆಯವರೆಗೆ ಕಾಡಾನೆಗಳನ್ನು ಅಟ್ಟಿ ಹಿಂದಿರುಗುತ್ತಾರೆ. ಪೊನ್ನಂಪೇಟೆ ಹಾಗೂ ತಿತಿಮತಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಶಾಸಕರು ಸೂಚನೆ ನೀಡಿದ್ದರೂ ಸಹ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ತಿಳಿಸಿದರೂ, ಕಾಡಾನೆಗಳ ಹಾವಳಿಯಿಂದಾಗಿ ಮತ್ತೂರು ಗ್ರಾಮಸ್ಥರು ಅತಿ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಈ ವ್ಯಾಪ್ತಿಯ ರೈತರ ಅಡಿಕೆ, ತೆಂಗು, ಬಾಳೆ, ಕಾಫಿ ಫಸಲು ನಷ್ಟ ಉಂಟಾಗುತ್ತಿದೆ. ಶಾಸಕರ ಕಾರ್ಯವೈಖರಿ ಮೆಚ್ಚುವಂತಹದ್ದು, ಆದರೆ ಶಾಸಕರ ಮಾತಿಗೂ ಅರಣ್ಯ ಇಲಾಖೆ ಬೆಲೆ ಕೊಡುತ್ತಿಲ್ಲ. ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ತಿತಿಮತಿ ವಲಯ ಹಾಗೂ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆಯವರು ಜಂಟಿ ಕಾರ್ಯಚರಣೆ ನಡೆಸಬೇಕು. ಕೂಡಲೇ ಅರಣ್ಯ ಇಲಾಖೆಯವರು ಕೃಷಿಕರಿಗೇ ಆದ ನಷ್ಟವನ್ನು ಪರಿಶೀಲಿಸಿ ಪರಿಹಾರ ದೊರಕಿಸಿಕೊಡಬೇಕು ಹಾಗೂ ಆನೆಗಳನ್ನು ಅರಣ್ಯಕ್ಕೆ ಅಟ್ಟುವ ಜಂಟಿ ಕಾರ್ಯಚರಣೆಯನ್ನು ನಡೆಸಬೇಕು. ಈ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಆನೆ ಕಾಣಸಿಗುವುದರಿಂದ ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಸಂಚರಿಸಲು ಭಯಪಡುವಂತಾಗಿದೆ ಕಾಡಾನೆಗಳ ದಾಳಿಯಿಂದಾಗಿ ಕೃಷಿಫಸಲು ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಒತ್ತಾಯಿಸಿದರು. ಮತ್ತೂರು, ಕಿರುಗೂರು ಗ್ರಾಮಗಳಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡುವ ಅರಣ್ಯ ಇಲಾಖೆ ಸಿಬ್ಬಂದಿಗಳು ಪಟಾಕಿ ಸಿಡಿಸಿ, ಕಾಡಾನೆಗಳನ್ನು ಮತ್ತೂರು ಗ್ರಾಮದಿಂದ ಮಾಯಾಮುಡಿ ಹಾಗೂ ಕಿರುಗೂರು ಗ್ರಾಮದ ಕೀರೆಹೊಳೆವರೆಗೆ ದಾಟಿಸಿ ಬರುತ್ತಾರೆ. ಆದರೇ ರಾತ್ರಿ ಮತ್ತೇ ಗ್ರಾಮದ ಕಾಫಿ ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳ ಹಿಂಡು ಕೃಷಿ ಫಸಲುಗಳನ್ನು ನಾಶಪಡಿಸುತ್ತಿರುವ ಘಟನೆ ಸುಮಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ.

ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ