ಪೊನ್ನಂಪೇಟೆ:ಹುದಿಕೇರಿ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ಹುಲಿ ದಾಳಿ: ಎರಡು ವರ್ಷದ ಕರು ಬಲಿ, ಎರಡು ಹಸುಗಳಿಗೆ ಗಂಭೀರ ಗಾಯ

ಪೊನ್ನಂಪೇಟೆ:ಮೇಯಲು ಬಿಟ್ಟ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ, ಕರುವೊಂದನ್ನು ಕೊಂದು ಹಾಕಿ, ಎರಡು ಹಸುಗಳನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ಹುದಿಕೇರಿ ಗ್ರಾಮದ ಕುಂಜ್ಞಪಂಡ ಗುಲಾಬಿ ಎಂಬುವರಿಗೆ ಸೇರಿದ ಮೂರು ಜಾನುವಾರುಗಳ ಮೇಲೆ ಕಳೆದ ಎರಡು ಮೂರುದಿನಗಳ ಹಿಂದೆ ಹುಲಿ ದಾಳಿ ನಡೆಸಿ, ಕರುವೊಂದನ್ನು ಕೊಂದು ಹಾಕಿ ಅರ್ಧಭಾಗ ತಿಂದುಹಾಕಿದೆ. ಉಳಿದ ಎರಡು ಹಸುಗಳನ್ನು ಗಂಭೀರವಾಗಿ ಗಾಯಗೊಳಿಸಿದೆ. ಕುಂಜ್ಞಪಂಡ ಗುಲಾಬಿ ಎಂಬುವರಿಗೆ ಸೇರಿದ ಜಾನುವಾರುಗಳನ್ನು ಐನಂಡ ಬೋಪಣ್ಣ ಎಂಬವರಿಗೆ ಸೇರಿದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭ ಹಸುಗಳನ್ನು ಅಟ್ಟಾಡಿಸಿದ ಹುಲಿ ಎರಡು ವರ್ಷದ ಕರುವನ್ನು ಕೊಂದು ಹಾಕಿ ಅರ್ಧ ಭಾಗದಷ್ಟು ತಿಂದು ಹಾಕಿದೆ. ಅಲ್ಲದೆ ಗುಂಬಿರ ಗಾಂಧಿ ಎಂಬುವರ ತೋಟದವರೆಗೆ ಒಂದು ಹಸುವನ್ನು ಎಳೆದೊಯ್ದಿದೆ. ಮತ್ತೊಂದು ಹಸುವನ್ನು ಗುಲಾಬಿ ಅವರ ಕೊಟ್ಟಿಗೆಯ ಪಕ್ಕದವರೆಗೂ ಅಟ್ಟಾಡಿಸಿದ ಹುಲಿ ಗಂಭೀರವಾಗಿ ಗಾಯಗೊಳಿಸಿದೆ. ಹುಲಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ಎರಡು ಹಸುಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಮೇಯಲು ಬಿಟ್ಟಿದ್ದ ಜಾನುವಾರುಗಳು ಮರಳಿ ಬಾರದ ಹಿನ್ನೆಲೆಯಲ್ಲಿ ಹಸುವಿನ ಮಾಲೀಕರು ಹುಡುಕಾಟ ನಡೆಸಿದ್ದರು ಹಸುಗಳ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಗ್ರಾಮದ ಚೆಕ್ಕೇರ ಸಚಿನ್ ಅವರು ತಮ್ಮ ಗದ್ದೆಗೆ ಬಂದ ಸಂದರ್ಭ ಹುಲಿದಾಳಿಗೆ ಬಲಿಯಾಗಿದ್ದ ಕರುವಿನ ಅರ್ಧಂಬರ್ಧ ಕಳೇಬರವನ್ನು ಕಂಡು ಹಸುವಿನ ಮಾಲೀಕರಿಗೆ ಹಾಗೂ ಪೊನ್ನಂಪೇಟೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊನ್ನಂಪೇಟೆ ಡಿ ಆರ್ ಎಫ್ ಓ ನಾಗೇಶ್ ಕುಮಾರ್ ಹಾಗೂ ಆರ್ ಆರ್ ಟಿ ತಂಡದ ಶಶಾಂಕ್,ಕೌಶಿಕ್, ಪುನೀತ್, ಸುಬ್ರಮಣಿ, ಗಸ್ತು ವನಪಾಲಕರಾದ ಸೋಮಣ್ಣ ಗೌಡ, ಮಣಿಕಂಠ ಹಾಗೂ ಅರಣ್ಯ ಇಲಾಖೆಯ ವೈದ್ಯರಾದ ಡಾ.ತಮ್ಮಯ್ಯ ಅವರು ಪರಿಶೀಲನೆ ನಡೆಸಿ, ಪಶುವೈದ್ಯಾಧಿಕಾರಿ ಚಂದ್ರಶೇಖರ್ ಅವರನ್ನು ಘಟನಾ ಸ್ಥಳಕ್ಕೆ ಕರೆತಂದು ಹುಲಿ ದಾಳಿಯಿಂದಾಗಿ ಗಾಯಗೊಂಡ ಎರಡು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಕರುವಿನ ಕಳೆಬರವನ್ನು ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ ಹೂತು ಹಾಕಲಾಯಿತು.
ಈ ಸಂದರ್ಭ ಡಿ ಆರ್ ಎಫ್ ಓ ನಾಗೇಶ್ ಅವರು ಮಾತನಾಡಿ, ಹುಲಿ ದಾಳಿಗೆ ಕರುವೊಂದು ಬಲಿಯಾಗಿದ್ದು, ಗಾಯಗೊಂಡ ಎರಡು ಜಾನುವಾರುಗಳಿಗೆ ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಲಾಗಿದೆ. ಹಾಗೆಯೇ ಹುಲಿಯ ಚಲನವಲನಗಳನ್ನು ಕಂಡುಹಿಡಿಯಲು 10 ರಿಂದ 12 ಸಿ. ಸಿ ಕ್ಯಾಮರಗಳನ್ನು ಅಳವಡಿಸಲಾಗಿದ್ದು ಗ್ರಾಮಸ್ಥರು, ತೋಟದ ಮಾಲೀಕರು ಹಾಗೂ ಕಾರ್ಮಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಸ್ಥಳೀಯರಾದ ರಮಾ ಕಾಶಿ ಅವರು ಮಾತನಾಡಿ, ಹಸುವಿನ ಮಾಲೀಕರು ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಇದೀಗ ಹಸುವನ್ನು ಕಳೆದುಕೊಂಡು ಜೀವನ ನಿರ್ವಹಣೆಗೆ ಸಂಕಷ್ಟ ಅನುಭವಿಸುವಂತಾಗಿದ್ದು ಹಸುವನ್ನು ಕಳೆದುಕೊಂಡವರಿಗೆ ಆದಷ್ಟು ಶೀಘ್ರ ಪರಿಹಾರ ನೀಡುವುದರ ಜತೆಗೆ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದರು.ಹುಲಿ ದಾಳಿ ಘಟನೆಯಿಂದಾಗಿ ಗ್ರಾಮಸ್ಥರು ಭಯದಲ್ಲೇ ಜೀವನ ಸಾಗಿಸುವಂತಾಗಿದೆ.
ವರದಿ: ಚಂಪಾ ಗಗನ, ಪೊನ್ನಂಪೇಟೆ