ಬಾಲ್ಯದಲ್ಲಿ ಓದಿದ ಶಾಲೆಗೆ ವಿಶೇಷ ಅನುದಾನದ ಕೊಡುಗೆ ನೀಡಿದ ಇಂಧನ ಸಚಿವ ಕೆ.ಜೆ ಜಾರ್ಜ್‌

ಬಾಲ್ಯದಲ್ಲಿ ಓದಿದ ಶಾಲೆಗೆ ವಿಶೇಷ ಅನುದಾನದ ಕೊಡುಗೆ ನೀಡಿದ  ಇಂಧನ ಸಚಿವ ಕೆ.ಜೆ ಜಾರ್ಜ್‌

ಪೊನ್ನಂಪೇಟೆ: ತಾಲೂಕಿನ ಮಾಯಮುಡಿ ಗ್ರಾಮ ವ್ಯಾಪ್ತಿಯಲ್ಲಿ ಸರಕಾರ ಅನುಮೋದಿಸಿದ ಶಾಲೆಗೆ, ಕೊಠಡಿಗಳನ್ನು ನಿರ್ಮಿಸುವ ಉದ್ದೇಶದಿಂದ ರೂ 79 ಲಕ್ಷದ ಅನುದಾನದಲ್ಲಿ ಕಾಮಗಾರಿ ಆರಂಭಿಸಲು, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ನೆರವೇರಿಸಿದರು.  

  ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕರ್ನಾಟಕ ರಾಜ್ಯ ಸರ್ಕಾರದ ಇಂಧನ ಸಚಿವರಾದ ಕೆಜೆ ಜಾರ್ಜ್ ರವರು ಈ ಶಾಲೆಯ ಹಳೆ ವಿದ್ಯಾರ್ಥಿ. ಹಾಗಾಗಿ ಮಾನ್ಯ ಸಚಿವರು ಈ ಶಾಲೆಯ ಅಭಿವೃದ್ಧಿಗೆ ತಮ್ಮ ವಿಶೇಷ ಅನುದಾನದ ಮೂಲಕ ₹ 79 ಲಕ್ಷ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕೆಂದು ಶಾಸಕರು ತಿಳಿಸಿದರು. ಕ್ಷೇತ್ರದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ತಾನು ಹಾಗೂ ಸರಕಾರ ಮಕ್ಕಳ ವಿದ್ಯಾರ್ಜನೆ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದು, ಪೋಷಕರು ಹಾಗೂ ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸ ಉನ್ನತಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಸಾಲು ಕೊಠಡಿಯಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ಆಧುನಿಕ ಸೌಲತ್ತುಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಮಾಜಿ ವಿಧಾನಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪ್ರತ್ಯು, ಮಾಯಮುಡಿ ಪಂಚಾಯಿತಿ ಅಧ್ಯಕ್ಷರು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಸ್ಥಳೀಯ ಪ್ರಮುಖರು, ಪಕ್ಷದ ಪ್ರಮುಖರು, ಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.