ಕೊಡಗು ಜಿಲ್ಲೆಯಲ್ಲಿ ಮಳೆಯಾರ್ಭಟ ರೆಡ್ ಅಲರ್ಟ್ ಘೋಷಣೆ:ಸಾರ್ವಜನಿಕರು ಮುಂಜಾಗ್ರತೆ ವಹಿಸಿ:ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕೊಡಗು ಜಿಲ್ಲೆಯಲ್ಲಿ ಮಳೆಯಾರ್ಭಟ ರೆಡ್ ಅಲರ್ಟ್ ಘೋಷಣೆ:ಸಾರ್ವಜನಿಕರು ಮುಂಜಾಗ್ರತೆ  ವಹಿಸಿ:ಜಿಲ್ಲಾಧಿಕಾರಿ ವೆಂಕಟ್ ರಾಜಾ

ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ನಾಳೆ ಮುಂಜಾನೆ 08:30 ರ ವರೆಗೆ ರೆಡ್ ಅಲರ್ಟ್ ಘೋಷಿಸಿದೆ ನಂತರ ಆರೇಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.   ಸಾರ್ವಜನಿಕರು/ಮಕ್ಕಳು/ಕಾರ್ಮಿಕರು ಮಳೆ ಗಾಳಿ/ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯುವುದು, ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಹೊರಗಿನ ಕೃಷಿ ಚಟುವಟಿಕೆಯಿಂದ ದೂರವಿರುವುದು ಮತ್ತು ಸಾರ್ವಜನಿಕರು/ಪ್ರವಾಸಿಗರು/ಮೀನುಗಾರರು ನದಿ/ನೀರಿರುವ ಪ್ರದೇಶಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು.

ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್‌ ತಂತಿಗಳಿಂದ ದೂರವಿರುವುದು.

ದುರ್ಬಲವಾದ / ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ / ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ರೆಂಬೆ-ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು. 

ಹೆಚ್ಚು ಮಳೆಯಾಗುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಂಭವ ಹೆಚ್ಚಾಗಿರುತ್ತದೆ ಹಾಗಾಗಿ ಇಂತಹ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.

 ಸಾರ್ವಜನಿಕರು ಹೊರಗೆ ತಿರುಗಾಡದೆ ಸೂಕ್ತ ಕಟ್ಟಡದಲ್ಲಿ ವಾಸಿಸಬೇಕು, ದುರ್ಬಲ ಕಟ್ಟಡದಲ್ಲಿ ವಾಸವಿದ್ದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂ ಸಂಖ್ಯೆ 08272-221077/221099 ಗೆ ಕರೆಮಾಡಬಹುದು.