ಸಿದ್ದಾಪುರ:ಗುಂಡಿಮಯ ರಸ್ತೆಯಿಂದ ಹೈರಾಣದ ಜನತೆ

ಸಿದ್ದಾಪುರ:ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಅಗಸ್ತೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು 2ವಾರ್ಡ್ ಗೂಡುಗದ್ದೆ ,ಗುಹ್ಯ ಕಕ್ಕಟುಕಾಡು, ಗ್ರಾಮದ ಸಂಪರ್ಕ ರಸ್ತೆಗಳು ದುರಸ್ತಿ ಕಾಣದೆ ಗುಂಡಿ ಮಯವಾಗಿದ್ದು 600ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿ ಸಂಚರಿಸುತ್ತಿದ್ದಾರೆ.ಗೂಡುಗದ್ದೆಯಿಂದ ನೆಲ್ಲಿಹುದಿಕೇರಿ ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟು ವರ್ಷಗಳೆ ಕಳೆದರೂ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.ಕಳೆದ 15ವರ್ಷಗಳ ಹಿಂದೆ ಕಾವೇರಿ ನದಿಗೆ ನೂತನ ಸೇತುವೆ ನಿರ್ಮಾಣ ಕಾರ್ಯದ ಸಂದರ್ಭ ಅಗಲೀಕರಣ ಕಂಡು ದುರಸ್ಥಿ ಪಡಿಸಿದ ನಂತರ ಇಲ್ಲಿ ಯಾವುದೇ ನಂತರ ರಸ್ತೆ ದುರಸ್ಥಿ ಕಾರ್ಯ ನಡೆದಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ನಿತ್ಯ ನೂರಾರು ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರು ಈ ರಸ್ತೆಯಲ್ಲೇ ಸಂಕಷ್ಟದಿಂದ ಸಂಚರಿಸುತಿದ್ದು,ಖಾಸಗಿ ಅಥವಾ ಬಾಡಿಗೆ ವಾಹನಗಳನ್ನೇ ಅವಲಂಬಿಸಬೇಕಿದೆ.ಹದಗೆಟ್ಟ ರಸ್ತೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಬಾಡಿಗೆ ವಾಹನಗಳು ಬಾರಲು ಹಿಂಜರಿಯುತ್ತಿದ್ದಾರೆ. ದುಪ್ಪಟ್ಟು ಬಾಡಿಗೆ ಕೇಳುತ್ತಾರೆ ಎಂದು ಸ್ಥಳಿಯರು ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿದ್ದಾರೆ. ರಸ್ತೆಗೆ ಸಂಪರ್ಕಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ಅಲ್ಲಿಲ್ಲಿ ಹೊಂಡಗಳು ನಿರ್ಮಾಣವಾಗಿ ಕೆರೆಯಂತಾಗಿದೆ.ರಸ್ತೆ ಬೀದಿಗಳಲ್ಲಿ ಗಿಡಗಂಟಿಗಳು ಬೆಳೆದು ರಸ್ತೆ ಕಿರಿದಾಗಿದ್ದು ವಾಹನಗಳು ಎದುರಾದರೆ ಜಾಗ ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ . ಬಹುತೇಕ ಕೂಲಿಕಾರ್ಮಿಕರೆ ವಾಸಿಸುವ ಇಲ್ಲಿ ಪ್ರತಿಯೊಂದು ಕೆಲಸಕ್ಕೂ ಸಿದ್ದಾಪುರ, ನೆಲ್ಲಿಹುದಿಕೇರಿಯನ್ನು ಅವಲಂಭಿಸಿದ್ದಾರೆ. ಇದರಿಂದ ಹದಗೆಟ್ಟ ರಸ್ತೆಯಲ್ಲೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.ಕಾಫಿತೋಟದ ಬದಿಯಲ್ಲಿ ಹಾದು ಹೋಗುವ ಈ ರಸ್ತೆಯಲ್ಲಿ ವನ್ಯ ಜೀವಿಗಳ ಉಪಟಳವು ಇದ್ದು ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿಯ ಹೊತ್ತು ಭಯದಲ್ಲೇ ಸಂಚರಿಸ ಬೇಕಾಗಿದ್ದು ಕೂಡಲೆ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.