ಕುಶಾಲನಗರದಲ್ಲಿ ನಾಳೆ ಎಸ್.ಎಸ್.ಎಫ್.ವತಿಯಿಂದ ಸೌಹಾರ್ದ ನಡಿಗೆ

ಮಡಿಕೇರಿ:ಭಾವೈಕ್ಯತೆಯ ಪರಂಪರೆಯನ್ನು ಎತ್ತಿಹಿಡಿದು ಸೌಹಾರ್ದತೆಯ ಸಂದೇಶಸಾರುವ ನಿಟ್ಟಿನಲ್ಲಿ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕೊಡಗು ಸಮಿತಿ ವತಿಯಿಂದ ಜು.03ರಂದು ಕುಶಾಲನಗರದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಜುನೈದ್ ತಿಳಿಸಿದರು.
ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಕರಾವಳಿ ಪ್ರದೇಶದಲ್ಲಿ ಇದು ಮಿತಿಮೀರಿ ಹೋಗಿದೆ. ಇಂತಹ ಸಂದರ್ಭದಲ್ಲಿ ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು ಸೌಹಾರ್ದತೆಯ ಸಂದೇಶವನ್ನು ಸಾರುವ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮನುಷ್ಯ ಮನಸ್ಸುಗಳನ್ನು ಪೋಣಿಸುವ ಎಂಬ ಘೋಷಣೆಯೊಂದಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಇನ್ನಿತರ ಜಾತಿ, ಧರ್ಮಗಳ ನಾಯಕರನ್ನು ಸೇರಿಸಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
(ಜು.03)ಇಂದು ಸಂಜೆ 04 ಗಂಟೆಗೆ ಕುಶಾಲನಗರದ ತಾವರೆಕೆರೆಯಿಂದ ಸೌಹಾರ್ದ ನಡಿಗೆ ಆರಂಭಗೊಂಡು ನಗರದ ಕಾರು ನಿಲ್ದಾಣದಲ್ಲಿ ಸಮಾರೋಪಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕೊಡಗು ಜಿಲ್ಲೆಯ ಜಂಇಯ್ಯತುಲ್ ಉಲಮಾ, ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಜೆಎಂ ಸಮಿತಿಗಳ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಕಮರುದ್ಧೀನ್ ಸನ್ವಾರಿ ಸಖಾಫಿ, ಕೋಶಾಧಿಕಾರಿ ನವಾಝ್ ಮದನಿ ಉಪಸ್ಥಿತರಿದ್ದರು.