ಎರಡನೇ ಜಲಾಶಯ ಚಿಕ್ಲಿಹೊಳೆ ಭರ್ತಿ: ಹೆಚ್ಚುವರಿ ನೀರು ನದಿಗೆ
ಕಣಿವೆ : ಕೊಡಗು ಜಿಲ್ಲೆಯ ಪಾಲಿಗೆ ಎರಡನೇ ಜಲಾಶಯ ಹಾಗೂ ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕುಶಾಲನಗರ ತಾಲ್ಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆ.ಕಳೆದ ಮೂರು ದಿನಗಳಿಂದ ರೋಹಿಣಿ ಮಳೆ ಕೊಡಗು ಜಿಲ್ಲಾದ್ಯಂತ ತನ್ನ ರೌದ್ರಾವತಾರ ತಾಳಿ ಯಥೇಚ್ಛ ಪ್ರಮಾಣದಲ್ಲಿ ಮಳೆ ಸುರಿಸುತ್ತಿರುವುದರಿಂದ ಜಲಾಶಯ ಕೇವಲ ಎರಡೇ ದಿನದಲ್ಲಿ ಭರ್ತಿಯಾಗಿದೆ.ಕೇವಲ 0.18 ಟಿಎಂಸಿ ಕನಿಷ್ಟ ಪ್ರಮಾಣದ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯ ಕಳೆದ ವರ್ಷದ ಇದೇ ಮೇ ಮಾಸಾಂತ್ಯದಲ್ಲಿ ನೀರು ಸಂಪೂರ್ಣ ಖಾಲಿಯಾಗಿ ಒಣಗುವ ಹಂತ ತಲುಪಿತ್ತು.
ಹನ್ನೆರಡು ಗ್ರಾಮಗಳ 2137 ಹೆಕ್ಟೇರ್ ಭೂಮಿಗೆ ಭತ್ತ ಬೆಳೆಯಲು ನೀರು ಪೂರೈಸಬೇಕಿದ್ದ ಈ ಜಲಾಶಯ ಸರ್ಕಾರದ ಅವಕೃಪೆಗೆ ಸಿಲುಕಿದ್ದು ಜಲಾಶಯದ ಯಾವ ನಾಲೆಗಳೂ ಕೂಡ ಸಮರ್ಪಕವಾಗಿಲ್ಲ. ಹಾಗಾಗಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಕೃಷಿಕರು ನೀರಾವತಿ ಇಲಾಖೆಯ ಅಧಿಕಾರಿಗಳ ಬೇಜವ್ದಾರಿ ಆಡಳಿತ ಧೋರಣೆಯಿಂದ ಬೇಸತ್ತು ಭತ್ತ ಬೆಳೆಯುವ ಭೂಮಿಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಇನ್ನೂ ಕೆಲವು ಕೃಷಿಕರು ತಮ್ಮ ಅಮೂಲ್ಯ ಭೂಮಿಯನ್ನು ಬಡಾವಣೆಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದಾರೆ.
ಪ್ರವಾಸಿಗರ ಲಗ್ಗೆ :
ಸ್ವಾಭಾವಿಕವಾದ ವನ್ಯ ಸಂಪತ್ತಿನ ಹಸಿರ ಸಿರಿಯೊಳಗೆ ಮೈತಳೆದು ನಿಂತಿರುವ ಈ ಜಲಾಶಯ ಭರ್ತಿಯಾಗಿ ಅರ್ಧ ಚಂದ್ರಾಕೃತಿಯ ಸುರುಳಿಯಲ್ಲಿ ಹಾಲ್ನೊರೆ ಸೂಸಿ ಧುಮ್ಮಿಕ್ಕಿ ಹರಿಯುವ ನಯನ ಮನೋಹರ ದೃಶ್ಯ ನೋಡುಗರ ಮನಸೂರೆಗೊಳಿಸುತ್ತಿದೆ. ಹಾಗಾಗಿ ಚಿಕ್ಲಿಹೊಳೆ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸುರಿವ ಮಳೆಯನ್ನು ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವುದು ಕಂಡು ಬಂತು.
ವರದಿ : ಕೆ.ಎಸ್.ಮೂರ್ತಿ