ಎಸ್ಎನ್‌ಡಿಪಿ ಯೋಗಂ ಯೂನಿಯನ್ ಸಿದ್ದಾಪುರ: ಮೇ 18ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ :ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳಿ: ವಿ.ಕೆ ಲೋಕೇಶ್

ಸಿದ್ದಾಪುರ: ಎಸ್‌ಎನ್‌ಡಿಪಿ ಯೋಗಂ ಯೂನಿಯನ್ ಸಿದ್ದಾಪುರ ಹಾಗೂ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ಸುಳ್ಯ ಇವರ ಸಹಯೋಗದಲ್ಲಿ ತಾ. 18ರಂದು ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ.ವಿ.ಕೆ. ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಎಸ್‌ಎನ್‌ಡಿಪಿ ಸಂಘಟನೆ ವತಿಯಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತಿದೆ. ಸಂಘಟನೆ ವತಿಯಿಂದ 2018 ಹಾಗೂ 2019 ರಲ್ಲಿ ಕಾವೇರಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾದ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ. ಕೋವಿಡ್ ಸಂದರ್ಭದಲ್ಲಿ ಕೂಡ ಸಂಘಟನೆ ವತಿಯಿಂದ ಸಹಾಯ ಮಾಡಲಾಗಿದೆ ಎಂದು ಹೇಳಿದರು. ಸಂಘಟನೆ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿಗಳ ಶಾಲೆಯ ಶುಲ್ಕ ಹಾಗೂ ಬಡ ಜನತೆಯ ಆಸ್ಪತ್ರೆ ವೆಚ್ಚಗಳನ್ನು ಕೂಡ ಭರಿಸಲಾಗಿದೆ.
ಈಗಾಗಲೇ ಎಸ್.ಎನ್.ಡಿ.ಪಿ. ಸಂಘಟನೆ ವತಿಯಿಂದ ದಾನಿಗಳ ನೆರವಿನಿಂದ ಆ್ಯಂಬ್ಯುಲೆನ್ಸ್ ಖರೀದಿಸಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ. ಮೃತಪಟ್ಟವರ ಮೃತದೇಹವನ್ನು ಫ್ರೀಜರ್ ನಲ್ಲಿ ಇಡಲು ಫ್ರೀಜರ್ ಖರೀದಿಸಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ ಎಂದರು. ಇದಲ್ಲದೆ ಸಂಘಟನೆ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಇದೀಗ ಸುಳ್ಯ.ಕೆ.ವಿ.ಜಿ. ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ತಾ.18 ರಂದು ಸಿದ್ದಾಪುರದ ಸ್ವರ್ಣಮಾಲ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ಶಿಬಿರ ನಡೆಯಲಿದೆ.
ನುರಿತ ವೈದ್ಯರುಗಳು ಭಾಗವಹಿಸಲಿದ್ದಾರೆ ಎಂದರು. ಸ್ತ್ರೀ ರೋಗ, ಶಸ್ತ್ರ ಚಿಕಿತ್ಸೆ, ನೇತ್ರ ಚಿಕಿತ್ಸೆ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗಗಳ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಲೋಕೇಶ್ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ.
ಶಿಬಿರವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನಿರ್ದೇಶಕ ಹಾಗೂ ಸುಳ್ಯ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಕೆ.ವಿ. ಚಿದಾನಂದ, ಎಸ್‌ಎನ್‌ಡಿಪಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್, ಎಸ್‌ಎನ್‌ಡಿಪಿ ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ವನಿತ, ಯೂನಿಯನ್ ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರ, ನೆಲ್ಲಿಹುದಿಕೇರಿ ಸ್ವರ್ಣ ಕ್ಲಿನಿಕ್ ಡಾ ಉದಯ್ ಕುಮಾರ್ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಎನ್‌ಡಿಪಿ ಯೂನಿಯನ್ ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಯನಿಯನ್ ಕೌನ್ಸಿಲರ್‌ಗಳಾದ ಟಿ.ಆರ್.ಪಾಪಯ್ಯ, ಗಿರೀಶ್ ಮಟ್ಟಂ, ಎಂ.ಎ.ಆನಂದ, ಎಂ.ಜಿ. ರಾಜು, ಜಿಲ್ಲಾ ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರ ಹಾಜರಿದ್ದರು.