ಒಂದೇ ವರ್ಷದಲ್ಲಿ 13 ಜಾನುವಾರುಗಳು ಬಲಿ ಪಡೆದ ಹುಲಿರಾಯ! ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಘಟನೆ:

ಒಂದೇ ವರ್ಷದಲ್ಲಿ 13 ಜಾನುವಾರುಗಳು ಬಲಿ ಪಡೆದ ಹುಲಿರಾಯ!  ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಘಟನೆ:
ಒಂದೇ ವರ್ಷದಲ್ಲಿ 13 ಜಾನುವಾರುಗಳು ಬಲಿ ಪಡೆದ ಹುಲಿರಾಯ!  ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಘಟನೆ:

ಪೊನ್ನಂಪೇಟೆ: ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕಟ್ಟೆ, ನೋಕ್ಯ, ಬಾಳಾಜಿ, ಮಾಯಮುಡಿ, ಹೆಬ್ಬಾಲೆ, ಸಿದ್ದಾಪುರ, ರುದ್ರಬೀಡು ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಕಳೆದ ಹನ್ನೊಂದು ತಿಂಗಳಲ್ಲಿ ಹುಲಿಯ ರಕ್ತದಾಹಕ್ಕೆ ಸುಮಾರು ಹದಿಮೂರು ಜಾನುವಾರುಗಳು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಹುಲಿ ಹಾವಳಿ ಬಗ್ಗೆ ಸರಕಾರ ಹಾಗೂ ಶಾಸಕರ ಗಮನಕ್ಕೆ ತರುವ ನಿಟ್ಟಿನಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೋಕ್ಯ ಗ್ರಾಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಸಭೆ ನಡೆಸಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆತ್ತಿಕೊಂಡರು. ಒಂದೇ ವರ್ಷದಲ್ಲಿ 13 ಜಾನುವಾರುಗಳನ್ನು ಹುಲಿ ಬಲಿಪಡೆದಿದೆ. ಒಂದು ತಿಂಗಳ ಅಂತರದಲ್ಲಿ ಆರು ಜಾನುವಾರುಗಳನ್ನು ಹುಲಿ ಕೊಂದು ಹಾಕಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ, ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

 ಅರಣ್ಯಾಧಿಕಾರಿಗಳ ನಡೆಗೆ ಧರ್ಮಜ ಉತ್ತಪ್ಪ ಹಾಗೂ ರಾಜ್ಯ ವನ್ಯಜೀವಿ ಸಂರಕ್ಷಣಾ ಘಟಕದ ಸದಸ್ಯ ಸಂಕೇತ್ ಪೂವಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹುಲಿ ದಾಳಿ ನಡೆಸಿ, ಜಾನುವಾರುಗಳನ್ನು ಬಲಿ ಪಡೆದ ಘಟನೆ ಬಗ್ಗೆ ತಮ್ಮ ಗಮನಕ್ಕೂ ತಾರದ ಬಗ್ಗೆ ಸಂಕೇತ್ ಪೂವಯ್ಯ ಅರಣ್ಯಾಧಿಕಾರಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

 ಈ ಸಂದರ್ಭ ಸಂಕೇತ್ ಪೂವಯ್ಯ ಅವರು ಮಾತನಾಡಿ, ನೋಕ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ದಾಳಿಯಿಂದಾಗಿ ಸುಮಾರು ಹದಿಮೂರು ಹಸುಗಳು ಮೃತಪಟ್ಟಿವೆ. ಈ ಬಗ್ಗೆ ಸರಕಾರ ಮತ್ತು ಶಾಸಕರ ಗಮನಕ್ಕೆ ತರುವ ಉದ್ದೇಶದಿಂದ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ವೈಜ್ಞಾನಿಕವಾಗಿ ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯಬೇಕೆಂಬ ಒತ್ತಾಯವಿದೆ. ಇಷ್ಟೊಂದು ಹಸುಗಳನ್ನು ಕಳೆದುಕೊಂಡರು ಅರಣ್ಯ ಇಲಾಖೆಯವರು ಸರಿಯಾದ ಸ್ಪಂದನೆ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆಲವೊಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾದ ಮಾಹಿತಿಯನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಇಚ್ಛಾಶಕ್ತಿ ಇಲ್ಲವೆಂದಾದರೆ ಇಚ್ಛಾಶಕ್ತಿ ಇರುವ ಅಧಿಕಾರಿಗಳಿಗೆ ಈ ಭಾಗದಲ್ಲಿ ಕೆಲಸ ಮಾಡಲು ಅವಕಾಶ ನೀಡಿ ಎಂದು ತೀಕ್ಷ್ಣವಾಗಿ ನುಡಿದರಲ್ಲದೇ, ವೈಜ್ಞಾನಿಕವಾದ ಮಾಹಿತಿ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲವೆಂದಾದರೆ ಇಲ್ಲಿಂದ ವರ್ಗಾವಣೆಯಾಗಿ ಬೇರೆಡೆಗೆ ತೆರಳುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾನಂಡ ಪೃಥ್ಯು ಅವರು ಮಾತನಾಡಿ, ಕಳೆದ ಒಂದು ವರ್ಷದಿಂದ ತಿತಿಮತಿ, ಮಾಯಮುಡಿ, ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕಡೆ ಹುಲಿ ದಾಳಿಯಾದರೆ ಮತ್ತೊಂದು ಕಡೆ ಆನೆ ದಾಳಿಯಿಂದ ನಷ್ಟ ಅನುಭವಿಸುತ್ತಿದ್ದೇವೆ. ಇಲ್ಲಿಯವರೆಗೂ 13 ಹಸುಗಳು ಬಲಿಯಾಗಿವೆ ಎಂಬ ಮಾಹಿತಿ ದೊರೆತಿದೆ. ಕಳೆದ ಆರು ತಿಂಗಳಿನಲ್ಲಿ ಆರು ಹಸುಗಳು ಬಲಿಯಾಗಿವೆ. ಇಲ್ಲಿ ಗ್ರಾಮಸ್ಥರಿಗೆ ಯಾವುದೇ ರೀತಿಯ ಮಾಹಿತಿಯನ್ನು ಅರಣ್ಯ ಇಲಾಖೆ ನೀಡದೇ ಇರುವುದರಿಂದ ಅರಣ್ಯ ಇಲಾಖೆಯವರ ನಿರ್ಲಕ್ಷತೆ ಎದ್ದು ಕಾಣುತ್ತಿದೆ. ಎಂದು ಆರೋಪಿಸಿದರಲ್ಲದೇ, ಹುಲಿ ಕಾರ್ಯಾಚರಣೆಯನ್ನು ಆರಂಭಿಸಿ ಹುಲಿಯನ್ನು ಸೆರೆ ಹಿಡಿಯಬೇಕೆಂಬುದೇ ಗ್ರಾಮಸ್ಥರ ಮನವಿಯಾಗಿದೆ ಎಂದು ಹೇಳಿದರು.

ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರು ಮಾತನಾಡಿ, ಹುಲಿ ದಾಳಿ ಇರುವ ನಾಲ್ಕೆದು ಗ್ರಾಮಗಳನ್ನು ಗುರುತು ಮಾಡಿಕೊಂಡಿದ್ದು, ಹುಲಿ ಗುರುತು ಪತ್ತೆ ಹಚ್ಚಿ ಸಾರ್ವಜನಿಕರಿಂದ ಮಾಹಿತಿ ಕಲೆಹಾಕಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದು, ಹುಲಿಯನ್ನು ಸೆರೆ ಹಿಡಿದು ಸುರಕ್ಷಿತ ಬೇರೆ ಪ್ರದೇಶಕ್ಕೆ ವರ್ಗಾಯಿಸುವುದಾಗಿ ಮೇಲಾಧಿಕಾರಿಗಳಿಂದ ಅನುಮತಿ ದೊರೆತ್ತಿದ್ದು, ಸಾರ್ವಜನಿಕರ ಮಾಹಿತಿಯನ್ನು ಆಧರಿಸಿ ಹುಲಿ ಕೂಂಬಿoಗ್ ಕಾರ್ಯಾಚರಣೆ ಆರಂಭಿಸಲಾಗುವುದು. ಹುಲಿ ದಾಳಿಯಿಂದ ಸಾವನ್ನಪ್ಪಿದ ಹಸುಗಳ ಮಾಲೀಕರಿಗೆ ಈಗಾಗಲೇ ಪರಿಹಾರವನ್ನು ವಿತರಿಸಲಾಗಿದೆ ಎಂದರು. ಡಿ ಆರ್ ಎಫ್ ಓ ಪ್ರಶಾಂತ್, ಗಸ್ತು ಅರಣ್ಯಪಾಲಕರಾದ ಸಚಿನ್, ಗಗನ್, ಗ್ರಾಮಸ್ಥರಾದ ಚೆಪ್ಪುಡಿರ ಕಿರಣ್, ಚೆಪ್ಪುಡಿರ ಎಸ್. ಮುದ್ದಪ್ಪ, ಚೆಪ್ಪುಡಿರ ಸುರೇಶ್ ಗಣಪತಿ, ಚೆಪ್ಪುಡಿರ ನಿಖಿಲ್, ಚೆಪ್ಪುಡಿರ ಪ್ರಕಾಶ್ ಬೆಳ್ಯಪ್ಪ, ಗುಂಬಿರ ಸುಕೇಶ್, ಸತೀಶ್, ಶಿವು, ಚೆಂದ್ರಿಮಾಡ ಕಿಷಿ, ಬೆನ್ನಿ ಹಾಗೂ ಮತ್ತಿತರು ಇದ್ದರು.

ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ