ಚೆಟ್ಟಿಮಾನಿ-ಕುಂದಚೇರಿ: 1.25ಕೋಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಚೆಟ್ಟಿಮಾನಿ-ಕುಂದಚೇರಿ: 1.25ಕೋಟಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಮಡಿಕೇರಿ:ಲೋಕೋಪಯೋಗಿ ಇಲಾಖೆ ಅಡಿಯಲ್ಲಿ, ಚೆಟ್ಟಿಮಾನಿ-ಕುಂದಚೇರಿಗೆ ತೆರಳುವ ರಸ್ತೆಯ ಅಭಿವೃದ್ಧಿಗೆ ಮಂಜೂರಾದ ₹ 1.25ಕೋಟಿಯ ಕಾಮಗಾರಿಗೆ ಭೂಮಿ ಪೂಜೆಯನ್ನು, ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ನೆರವೇರಿಸಿದರು.     

ಅಕ್ಕ ಪಕ್ಕದ ಗ್ರಾಮಗಳನ್ನು ಸಂಪರ್ಕಿಸುವ ಅತೀ ಹತ್ತಿರದ ರಸ್ತೆ ಇದಾಗಿದ್ದು, ಈ ರಸ್ತೆಯ ದುರಸ್ತಿಯ ಬೇಡಿಕೆ ಈ ಹಿಂದೆ ಸ್ಥಳೀಯರಿಂದ ಶಾಸಕರಿಗೆ ಬಂದಿತ್ತು. ಕ್ಷೇತ್ರದಿಂದ ರಸ್ತೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿರುವ ಶಾಸಕರು ಕೂಡಲೇ ಪಿಡಬ್ಲ್ಯೂ ಇಲಾಖೆ ವತಿಯಿಂದ ಈ ಕಾಮಗಾರಿ ಕೈಗೊಂಡು ಉತ್ತಮ ರಸ್ತೆ ನಿರ್ಮಾಣವಾಗುವಂತಾಗಲು ಅನುದಾನವನ್ನು ಒದಗಿಸಿದ್ದರು. ಕುಂದಚೇರಿಯಲ್ಲಿ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಇಲ್ಲಿಯ ಭೌಗೋಳಿಕ ಹಾಗೂ ಹವಮಾನಕ್ಕೆ ಅನುಗುಣವಾಗಿ ರಸ್ತೆಯನ್ನು ನಿರ್ಮಿಸಿ, ವಿಪರೀತ ಮಳೆ ಆಗುವ ಈ ಭಾಗದಲ್ಲಿ ಉತ್ತಮ ರಸ್ತೆ ನಿರ್ಮಾಣವಾಗಲಿ ಎಂದು ಹಾರೈಸಿದರು.    

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕದಂಬಾಡಿ ರಮೇಶ್, ಪಕ್ಷದ ಪ್ರಮುಖರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.