ಪೊನ್ನಂಪೇಟೆ : ಕಿರುಗೂರು ಗ್ರಾಮದಲ್ಲಿ ಚೆಪ್ಪುಡಿರ ಕುಟುಂಬಸ್ಥರು ಆಚರಿಸುವ ಶ್ರೀ ವಿಷ್ಣುಮೂರ್ತಿ ಹಾಗೂ ಮಂದಣ್ಣ ಮೂರ್ತಿ ದೇವರ ಉತ್ಸವಕ್ಕೆ ಚಾಲನೆ
ಪೊನ್ನಂಪೇಟೆ: ತಾಲೂಕಿನ ಕಿರುಗೂರು ಗ್ರಾಮದಲ್ಲಿ ಚೆಪ್ಪುಡಿರ ಕುಟುಂಬಸ್ಥರು ಮೂರು ವರ್ಷಗಳಿಗೊಮ್ಮೆ ಮೂರು ದಿನಗಳ ಕಾಲ ಆಚರಿಸುವ ಶ್ರೀ ವಿಷ್ಣುಮೂರ್ತಿ ಹಾಗೂ ಮಂದಣ್ಣ ಮೂರ್ತಿ ದೇವರ ಉತ್ಸವಕ್ಕೆ ಬುಧವಾರ ಶ್ರದ್ಧಾಭಕ್ತಿಯ ಚಾಲನೆ ದೊರೆಯಿತು. ಚೆಪ್ಪುಡಿರ ಐನ್ ಮನೆಯಲ್ಲಿ ಗುರುಹಿರಿಯರಿಗೆ ಅಕ್ಷತೆ ಹಾಕುವುದರ ಮೂಲಕ ಕುಟುಂಬದ ಅಧ್ಯಕ್ಷರಾದ ಸಿ. ಜಿ ಪೂವಣ್ಣ ಅವರ ಮುಂದಾಳಾತ್ವದಲ್ಲಿ, ಅರ್ಚಕರಾದ ಜನಾರ್ಧನ್ ಭಟ್ ಅವರ ನೇತೃತ್ವದಲ್ಲಿ ನಾಗದೇವತೆಗೆ ವಿವಿಧ ಪೂಜೆ ಸಲ್ಲಿಸಲಾಯಿತು. ವಿಷ್ಣುಮೂರ್ತಿ ಹಾಗೂ ಮಂದಣ್ಣ ಮೂರ್ತಿ ದೇವರ ದೇವಸ್ಥಾನದಲ್ಲಿ ಶುದ್ಧ ಕಲಶ ಮಾಡುವ ಮೂಲಕ ಮೂರು ದಿನಗಳ ಕಾಲ ನಡೆಯುವ ದೇವರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಚೆಪ್ಪುಡಿರ ಐನ್ ಮನೆಯ ಮೂಲಸ್ಥಾನದಲ್ಲಿ ಪ್ರತಿಷ್ಠಾಪಿಸಿದ ನಾಗನ ವಾರ್ಷಿಕ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅರ್ಚಕರಾದ ಜನಾರ್ಧನ್ ಭಟ್ ಅವರು, ವರ್ಷಂಪತಿಯಂತೆ ಈ ವರ್ಷವೂ ನಾಗದೇವರಿಗೆ ಅಭಿಷೇಕ, ಫಲಾಭಿಷೇಕ, ಕ್ಷೀರಾಭಿಷೇಕ ಮತ್ತು ಅಲಂಕಾರ ಪೂಜೆ ಸಲ್ಲಿಸಲಾಗಿದೆ. ವಿಶೇಷವಾಗಿ ಮೂರು ವರ್ಷಗಳಿಗೊಮ್ಮೆ ವಿಷ್ಣುಮೂರ್ತಿ ದೇವರ ಹಬ್ಬವು ನಡೆಯುತ್ತದೆ. ವಾಡಿಕೆಯಂತೆ ನಾಗದೇವರಿಗೆ ಮೊದಲು ಪೂಜೆಯನ್ನು ಸಲ್ಲಿಸಿ ಆನಂತರ ವಿಷ್ಣುಮೂರ್ತಿ ದೇವಾಲಯದಲ್ಲಿ ಕಲಶ ಅಭಿಷೇಕ, ಅಲಂಕಾರ ಪೂಜೆ ನಡೆಸಿ ವಿಷ್ಣುಮೂರ್ತಿ ದೇವರ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಚೆಪ್ಪುಡಿರ ಕುಟುಂಬದ ಹಿರಿಯರಾದ ಪೊನ್ನಪ್ಪ ಅವರು ಮಾತನಾಡಿ, ಪುರಾತನ ಕಾಲದಿಂದಲೂ ಕುಟುಂಬದಲ್ಲಿ ವಿಷ್ಣುಮೂರ್ತಿ ಹಾಗೂ ಮಂದಣ್ಣ ಮೂರ್ತಿ ದೇವರನ್ನು ಕುಲದೇವರಾಗಿ ಆರಾಧಿಸಿಕೊಂಡು ಬರಲಾಗುತ್ತಿದ್ದು ಅದರಂತೆ ಮೂರು ವರ್ಷಕ್ಕೊಮ್ಮೆ ಕುಟುಂಬದವರೆಲ್ಲ ಸೇರಿ ಮೊದಲು ನಾಗದೇವರಿಗೆ ಪೂಜೆಯನ್ನು ಸಲ್ಲಿಸಿ ಅನಂತರ ವಿಷ್ಣುಮೂರ್ತಿ ದೇವರ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಬೆಲೆಕಾರ ಸಂಜು ಅವರು ಮಾತನಾಡಿ, ಮೂರು ವರ್ಷಕ್ಕೊಮ್ಮೆ ನಡೆಯುವ ವಿಷ್ಣುಮೂರ್ತಿ ದೇವರ ಉತ್ಸವದಲ್ಲಿ ವಿವಿಧ ದೈವಗಳ ಕೋಲವನ್ನು ಕಟ್ಟುವ ವಾಡಿಕೆ ಇದ್ದು, ಮೂರು ಬಾರಿ ಇಲ್ಲಿ ದೈವಗಳ ಕೋಲ ನಡೆಸಿದ್ದು, ಅದೇ ರೀತಿ ಈ ವರ್ಷವೂ ದೈವಗಳ ಕೋಲ ಕಟ್ಟಲಾಗುತ್ತಿದೆ ಎಂದರು.ಚೆಪ್ಪುಡಿರ ಕುಟುಂಬಸ್ಥರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ
