ಪೊನ್ನಂಪೇಟೆ: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸಮಸ್ಯೆ!!! ಮಳೆಗಾಲದಲ್ಲಿ ಕಾಲ್ನಡಿಗೆಯಲ್ಲೇ ಮನೆ ತಲುಪಬೇಕಾದ ಪರಿಸ್ಥಿತಿ!
ಪೊನ್ನಂಪೇಟೆ :-ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಮಾಲೆ ಕೊಲ್ಲಿ, ಚೊರೇಂಗೆ ಮೊಟ್ಟೆ, ಅನ್ಯೂಟ್ ರಸ್ತೆ, ಬೊಮ್ಮಂಜಿ ಹಾಗೂ ಹಾಕಮನೆ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ದಯನೀಯ ಬದುಕು ದೂಡುವಂತಾಗಿದೆ. ಗ್ರಾಮದಲ್ಲಿ ಸುಮಾರು 40ರಿಂದ 50 ಮನೆಗಳಿದ್ದು, ರಸ್ತೆ ಅಭಿವೃದ್ಧಿ ಕಾಣದೇ ಗ್ರಾಮಸ್ಥರು ಸಂಕಷ್ಟವನ್ನು ಎದುರಿಸುವಂತಾಗಿದೆ. ಮಳೆಗಾಲದಲ್ಲಿ ಮುಖ್ಯ ರಸ್ತೆಯ ಬಳಿ ವಾಹನಗಳನ್ನು ನಿಲ್ಲಿಸಿ ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ತೆರಳಬೇಕು. ರಸ್ತೆಬದಿ ಕಾಡುಗಿಡಗಂಟಿಗಳು ಬೆಳೆದುನಿಂತಿದ್ದು, ಗುಂಡಿಬಿದ್ದ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸಬೇಕಿದೆ. ಗ್ರಾಮದಲ್ಲಿ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಕತ್ತಲೆಯಲ್ಲೇ ದಿನದೂಡುವಂತಾಗಿದೆ. ಇದರೊಂದಿಗೆ ವನ್ಯಪ್ರಾಣಿಗಳ ಉಪಟಳದಿಂದಾಗಿ ಜೀವಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುವಂತಾಗಿದೆ. ಕಾಡು ಪ್ರಾಣಿಗಳ ಉಪಟಳದಿಂದಾಗಿ ಕೃಷಿಕರು ಬಸವಳಿಯುವಂತಾಗಿದೆ. ತೇರಾಲು -ಬೀರುಗ ರಸ್ತೆ ಕಾಮಗಾರಿಗೆ 2018 ನೇ ಇಸವಿಯಲ್ಲಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 8 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿತ್ತು ಆದರೆ, ಕೆಲವು ತೋಟದ ಮಾಲೀಕರು ಹಾಗೂ ಪರಿಸರ ವಾದಿಗಳು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ತಪ್ಪು ಮಾಹಿತಿ ನೀಡಿದ್ದರಿಂದಾಗಿ ಬಂದ ಬಂದ ಅನುದಾನದ ಹಣ ವಾಪಸ್ ಆದ ಹಿನ್ನೆಲೆಯಲ್ಲಿ ಸಂಪರ್ಕ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಳಲು ತೋಡಿಕೊಂಡರು. ಕಳೆದ ಒಂದು ವಾರದಿಂದ ಸುರಿದ ಭಾರಿ ಗಾಳಿ ಮಳೆಗೆ ಎಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 13 ದಿನಗಳಿಂದ ವಿದ್ಯುತ್ ಸಂಪರ್ವಿಲ್ಲದೆ, ಮೊಬೈಲ್ ನೆಟ್ವರ್ಕ್ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಚೆಸ್ಕಾಂ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸಮಸ್ಯೆ ನಿವಾರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸುವ ಗ್ರಾಮಸ್ಥರು, ಶನಿವಾರದಂದು ಮುರಿದು ಬಿದ್ದಿರುವ ಎಂಟು ವಿದ್ಯುತ್ ಕಂಬಗಳನ್ನು ಮರು ಅಳವಡಿಸಲು ವಿದ್ಯುತ್ ಕಂಬಗಳನ್ನು ತಂದ ವಾಹನಕ್ಕೆ ಡೀಸೆಲ್ ಹಾಕಲು ಐದೂವರೆ ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿದ್ದು, ಗ್ರಾಮಸ್ಥರೆಲ್ಲ ಸೇರಿ ಹಣ ನೀಡಿರುವುದಾಗಿ ಗ್ರಾಮಸ್ಥರು ನೇರ ಆರೋಪ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ರವಿ ಕಾರ್ಯಪ್ಪ, ಮುರಿದು ಬಿದ್ದಿರುವ ಎಂಟು ವಿದ್ಯುತ್ ಕಂಬಗಳನ್ನು ಮರು ಅಳವಡಿಸಲು ವಿದ್ಯುತ್ ಕಂಬಗಳನ್ನು ತಂದ ವಾಹನಕ್ಕೆ ಡೀಸೆಲ್ ಹಾಕಲು ಐದೂವರೆ ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿದ್ದು, ಗ್ರಾಮಸ್ಥರೆಲ್ಲ ಸೇರಿ ಹಣ ನೀಡಿದ ಮೇಲೆ ವಿದ್ಯುತ್ ಕಂಬಗಳನ್ನು ಅಳವಡಿಸದೆ, ವಿದ್ಯುತ್ ಕಂಬ ಇಲ್ಲವೆಂದು ಹೇಳಿ ನೇರವಾಗಿ ಲೈನ್ ಎಳೆದು ವಿದ್ಯುತ್ ಸಂಪರ್ಕ ನೀಡಿದ್ದು ಇದೀಗ ಆ ಲೈನ್ ನಿಂದ ಗ್ರೌಂಡಿಂಗ್ ಆಗಿ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಬೀರುಗ ಗ್ರಾಮದ ನಿವಾಸಿ, ಮಾಜಿ ಯೋಧ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ. ಎಂ. ಗಿರೀಶ್ ತಮ್ಮಯ್ಯ ಅವರು ಮಾತನಾಡಿ, ಗ್ರಾಮದಲ್ಲಿ ಸುಮಾರು 40ರಿಂದ 50 ಮನೆಗಳಿದ್ದು, ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕೇವಲ ಚುನಾವಣೆ ಸಂದರ್ಭ ರಾಜಕಾರಣಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಆಲಿಸಿ ತೆರಳಿದ ಬಳಿಕ ಇತ್ತ ತಿರುಗಿಯೂ ನೋಡಲ್ಲವೆಂದು ಆರೋಪಿಸಿದರಲ್ಲದೇ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೀರುಗ ಗ್ರಾಮಕ್ಕೆ ರಸ್ತೆ ಹಾಗೂ ಪೂಜೆ ಕಲ್ಲು ಸೇತುವೆ ನಿರ್ಮಾಣ ಕಾಮಗಾರಿಯನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಾಜಿ ಯೋಧ ಬಿರುನಾಣಿ ಗ್ರಾಮ ಪಂಚಾಯತಿ ಸದಸ್ಯ ಬೊಟ್ಟಂಗಡ ಗಿರೀಶ್, ರವಿ ಕಾರ್ಯಪ್ಪ, ದಿಲೀಪ್, ರಮೇಶ್, ನವೀನ್, ಚೈತ್ರ, ನಂದ, ತಿಲಕ್, ಮೊಟ್ಟಯ್ಯ, ಬಿ. ಎಂ ನಂದ, ಹಾಗೂ ಗ್ರಾಮಸ್ಥರು ಇದ್ದರು.
ವರದಿ : ಚಂಪಾ ಗಗನ, ಪೊನ್ನಂಪೇಟೆ.