ಬೆಳ್ಳುಮಾಡು ಪ್ರವಾಹದಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್ : ಭಯಭೀತರಾದ ಪ್ರಯಾಣಿಕರನ್ನು ರಕ್ಷಿಸಿದ ಸ್ಥಳೀಯರು:ವ್ಯಾಪಕ ಮೆಚ್ಚುಗೆ

ಬೆಳ್ಳುಮಾಡು ಪ್ರವಾಹದಲ್ಲಿ ಸಿಲುಕಿದ ಕೆಎಸ್ಆರ್ಟಿಸಿ ಬಸ್ :   ಭಯಭೀತರಾದ ಪ್ರಯಾಣಿಕರನ್ನು ರಕ್ಷಿಸಿದ ಸ್ಥಳೀಯರು:ವ್ಯಾಪಕ ಮೆಚ್ಚುಗೆ
ನೀರಿನಲ್ಲಿ ಮುಳುಗಿದ ಬಸ್ಸ್...

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಪ್ರಯಾಣಿಕರನ್ನೊತ್ತು ಬೆಂಗಳೂರಿಗೆ ಸಾಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸೊಂದು ಪ್ರವಾಹದಲ್ಲಿ ಸಿಲುಕಿದ ಪರಿಣಾಮ ಭಯಭೀತರಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ನಾಪೋಕ್ಲು ವಿರಾಜಪೇಟೆ ಮುಖ್ಯರಸ್ತೆಯ ಬೆಳ್ಳುಮಾಡು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ

ಭಾನುವಾರ ರಾತ್ರಿ ನಾಪೋಕ್ಲು ಕಡೆಯಿಂದ ಕೈಕಾಡು,ಪಾರಾಣೆ,ಬೆಳ್ಳು ಮಾಡು, ವಿರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ರಾಜಹಂಸ ಬಸ್ ಬೆಳ್ಳುಮಾಡು ಸೇತುವೆ ಬಳಿಯ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದೆ. ಜಿಲ್ಲಾಧ್ಯಂತ ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿತ್ತು. ಭಾನುವಾರ ರಾತ್ರಿ ಸುರಿದ ವ್ಯಾಪಕ ಮಳೆಗೆ ಬೆಳ್ಳುಮಾಡು ಸೇತುವೆ ಬಳಿಯ ರಸ್ತೆಯಲ್ಲಿ ಪ್ರವಾಹ ಆವರಿಸಿತ್ತು.ಅಲ್ಪ ಪ್ರಮಾಣದಲ್ಲಿ ಪ್ರವಾಹವಿರಬಹುದೆಂದು ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾನೆ ಆದರೆ ಅಷ್ಟರಲ್ಲಿ ಬಸ್ಸು ನಿಯಂತ್ರಣ ಕಳೆದು ರಸ್ತೆಯಿಂದ ಸರಿದು ನದಿ ದಡದಲ್ಲಿ ನಿಂತು ಹೋಗಿತ್ತು. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಯವೀತರಾಗಿದ್ದರು.ಘಟನೆ ಕುರಿತು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಪಾರಾ ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆದಾವಿಸಿದ ಕಟ್ಟಿ ಕುಶಾಲಪ್ಪ ಅವರು ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರನ್ನು ಸ್ಥಳೀಯರಾದ ಮಾತಂಡ ರನ್ನು, ಕುಳಿಯಕಂಡ ಪೊನ್ನಣ್ಣ, ಕಾಮೇಯಂಡ ಸಾಮ್ರಾಟ್,ಚರ್ಮಂಡ ದಿನು ಎಂಬುವವರ ಸಹಕಾರದಿಂದ ರಕ್ಷಣೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪ್ರವಾಹದಲ್ಲಿ ಸಿಲುಕಿದ್ದ ಬಸ್ಸನ್ನು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರದ ಮೂಲಕ ಹೊರತೆಗೆಯಲಾಯಿತು. ಬಳಿಕ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು ಬದಲಿ ಬಸ್ಸಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇವರ ತುರ್ತು ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.