ವರುಣಾರ್ಭಟ: ನದಿ ದಡ ನಿವಾಸಿಗಳಿಗೆ ಪ್ರವಾಹದ ಭೀತಿ! ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ತರು: ಸಿದ್ದಾಪುರದಲ್ಲಿ ಕಾಳಜಿ ಕೇಂದ್ರ ಪ್ರಾರಂಭ:

ಸಿದ್ದಾಪುರ(Coorgdaily): ಕಳೆದ ನಾಲ್ಕು ದಿನಗಳಿಂದ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ಕಾವೇರಿ ನದಿ ನೀರಿನ ಮಟ್ಟ ಏರಿಕೆ ಕಂಡು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಈಗಾಗಲೇ ನದಿ ದಡದ ಸಂಪರ್ಕ ರಸ್ತೆಗಳು ಕಡಿತಗೊಂಡಿದ್ದು ಸಂಚಾರಕ್ಕೂ ಸಾಧ್ಯವಾಗದಂತಾಗಿದೆ.
ಕೊಂಡಂಗೇರಿ, ಹಚ್ಚಿನಾಡು, ಕಕ್ಕಟ ಕಾಡು, ಗುಯ್ಯ, ಕೂಡುಗದ್ದೆ, ಕರಡಿಗೋಡು, ಬೆಟ್ಟದ ಕಾಡು, ಕುಂಬಾರಗುಂಡಿ ಸೇರಿದಂತೆ ನದಿ ದಡ ಗ್ರಾಮ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ .ಜಿಲ್ಲಾಡಳಿತದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ನದಿದಡದ 250ಕ್ಕೊ ಹೆಚ್ಚು ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಮುಂಜಾಗ್ರತ ಕ್ರಮವಾಗಿ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪ ಹಾಗೂ ನೆಲ್ಲಿ ಹುದಿಕೇರಿಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು ನದಿದಡ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ಬರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಈಗಾಗಲೇ ಹಲವುಮನೆಗಳಿಗೆ ನೀರು ತಲುಪಿದ್ದು ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ, ಪೊಲೀಸರು ಜೊತೆಗೂಡಿ ಸುರಕ್ಷಿತ ಸ್ಥಳಕ್ಕೆಗಳಿಗೆ ಸ್ಥಳಾಂತರಿಸಿದ್ದಾರೆ.
ಅಧಿಕಾರಿಗಳ ತಂಡ ಗ್ರಾಮ ವ್ಯಾಪ್ತಿಯಲ್ಲಿ ಠಿಕಾಣೆ ಹೊಡಿದ್ದು ಸುರಕ್ಷಿತ ಕ್ರಮ ಕೈಗೊಂಡಿದ್ದಾರೆ.ಭಾರಿ ಮಳೆಯಿಂದಾಗಿ ಎರಡು ಮನೆಗಳಿಗೆ ಹಾನಿಯಾಗಿದ್ದು ಪಾಲಿಬೆಟ್ಟದ ದರ್ಗಾ ಕಾಂಪೌಂಡ್ ಕುಸಿತಗೊಂಡಿದೆ.ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಕತ್ತಲ ಜೀವನ ನಡೆಸುವಂತಾಗಿದೆ.ನೂರಾರು ಕಂಬಗಳು ನೆಲಕುರುಳಿದ್ದು ಗಾಳಿ ಮಳೆಯನ್ನು ಲೆಕ್ಕಿಸದೆ ಕಾಡುಪ್ರಾಣಿಗಳ ಭಯದ ನಡುವೆಯೂ ತಮ್ಮ ಜೀವದ ಹಂಗು ತೊರೆದು ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಐದು ವರ್ಷಗಳ ಹಿಂದೆ ಸುರಿದ ಭಾರಿ ಮಳೆಯಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಮನೆಗಳ ನಂತರ ಇಂದಿಗೂ ಶಾಶ್ವತ ಪುನರ್ ವಸತಿ ಆಗದೆ ದಾನಿಗಳ ಸಹಕಾರದಿಂದ ಗುಡಿಸಿಲನ ಕಟ್ಟಿ ಜೀವನ ನಡೆಸುತ್ತಿರುವ ಕುಟುಂಬ ಮತ್ತೆ ಅದೇ ಆತಂಕದ ಜೀವನ ನಡೆಸುವಂತಾಗಿದೆ.ಪ್ರತಿ ವರ್ಷದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಭರವಸೆ ನಂತರ ಮತ್ತೆ ಹಿಂತಿರುಗುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಪ್ರವಾಹದ ಭೀತಿಗೆ ಎದುರಿ ಗುಡಿಸಲು ಖಾಲಿ ಮಾಡುವ ನಿವಾಸಿಗಳು ಮಳೆ ಕಡಿಮೆಯಾದ ನಂತರ ಮತ್ತೆ ಅದೇ ಬದುಕಿನತ್ತ ಮುಖ ಮಾಡುತ್ತಾರೆ.