ವರುಣಾರ್ಭಟ: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಹತ್ತು ಮನೆಗಳಿಗೆ ಹಾನಿ
ಹಳ್ಳಿಗಟ್ಟು(Coorgdaily) :-ಪೊನ್ನಂಪೇಟೆ ತಾಲೂಕಿನ ಅರ್ವತೋಕ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ಚಿಮ್ಮಚೀರ ಸಿ.ಕೆ.ಅಲೀಮಾ ಎಂಬವರಿಗೆ ಸೇರಿದ ಮನೆಯ ಒಂದು ಭಾಗ, ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿದುಬಿದ್ದಿದೆ. ಸೋಮವಾರ ಮಧ್ಯ ರಾತ್ರಿ ಸುಮಾರು 1.30ಗಂಟೆ ಸುಮಾರಿಗೆ ಭಾರಿ ಗಾಳಿ ಮಳೆಗೆ ಮನೆಯ ಒಂದು ಭಾಗವು ಕುಸಿದುಬಿದ್ದಿದ್ದು, ಗಾಢನಿದ್ರೆಯಲ್ಲಿದ್ದ ಮನೆಮಂದಿ ಗೋಡೆ ಬೀಳುವ ಭಾರಿ ಶಬ್ದ ಕೇಳಿ ಮನೆಯಿಂದ ಹೊರಗೋಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 50 ವರ್ಷದ ಮನೆಯ ಒಂದು ಭಾಗ ಸಂಪೂರ್ಣ ಕುಸಿದುಬಿದ್ದಿದ್ದು, ಸುಮಾರು 20ರಿಂದ 25 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊನ್ನಂಪೇಟೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ತಾಲೂಕು ತಹಸೀಲ್ದಾರ್ ಮೋಹನ್ ಕುಮಾರ್ ಅವರು, ಮಳೆಗಾಲವನ್ನು ಎದುರಿಸಲು ತಾಲೂಕು ಆಡಳಿತ ಸರ್ವ ಸಿದ್ದತೆ ಮಾಡಿಕೊಂಡಿದೆ. ಗಾಳಿ ಮಳೆಗೆ ಪೊನ್ನಂಪೇಟೆ ಹೋಬಳಿಯಲ್ಲಿ 7 ಮನೆ, ಹುದಿಕೇರಿಯಲ್ಲಿ 1 ಕೊಟ್ಟಿಗೆ ಬಾಳೆಲೆಯಲ್ಲಿ 2 ಮನೆಗಳು ಹಾಗೂ ಶ್ರೀಮಂಗಲ ವ್ಯಾಪ್ತಿಯಲ್ಲಿ ಒಂದು ಮನೆ ಹೀಗೆ ಹತ್ತು ಮನೆಗಳು ಹಾನಿಯಾಗಿದ್ದು, ಪೊನ್ನಂಪೇಟೆ ವ್ಯಾಪ್ತಿಗೆ ಸಂಬoಧಿಸಿದoತೆ ಹೊದ್ದೂರಿನ ಆಲಿಯವರ ಮನೆ ಸಂಪೂರ್ಣ ಜಖಂಗೊoಡಿದ್ದು ಇದಕ್ಕೆ ಪರಿಹಾರ ಒದಗಿಸಲಾಗುವುದು. ಮಳೆಹಾನಿ ಸಂತ್ರಸ್ಥರಿಗೆ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ವರದಿ:- ಚಂಪಾ ಗಗನ, ಪೊನ್ನಂಪೇಟೆ