ವಿರಾಜಪೇಟೆ: ಸಹಾರ ಫ್ರೆಂಡ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ: ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಅಮೂಲ್ಯ ಬೆಲೆ ಕೊಡುವುದರೊಂದಿಗೆ, ಆರೋಗ್ಯವನ್ನು ಕಾಪಾಡಿಕೊಳ್ಳಿ; ಎ.ಎಸ್ ಪೊನ್ನಣ್ಣ ಕರೆ
ವಿರಾಜಪೇಟೆ:ಇಲ್ಲಿನ ಎಫ್ಎಂಸಿ ರಸ್ತೆಯಲ್ಲಿರುವ ಟೀಚರ್ಸ್ ಸ್ಟೋರ್ ಕಟ್ಟಡ ಸಭಾಂಗಣದಲ್ಲಿ, ಸಹಾರ ಫ್ರೆಂಡ್ಸ್ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ವಿಶ್ವ ರಕ್ತದಾನಿಗಳ ದಿನಾಚರಣೆ 2025 ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭಾಗವಹಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಇಂದಿನ ಯುಗದಲ್ಲಿ ರಕ್ತದಾನ ಎಂಬುದು ಎಲ್ಲಾ ದಾನಗಳಲ್ಲಿಯೂ ಶ್ರೇಷ್ಠ ಎನಿಸಿಕೊಂಡಿದೆ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಅಮೂಲ್ಯ ಬೆಲೆ ಕೊಡುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು. ಇಂತಹ ಉತ್ತಮ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಿದ್ದು ಇದರಿಂದ ಸಮಾಜ ಉತ್ತಮ ದಿಕ್ಕಿನಲ್ಲಿ ಚಲಿಸುವುದಕ್ಕೆ ಸಹಾಯವಾಗಲಿದೆ ಎಂದು ಬಣ್ಣಿಸಿದರು. ರಕ್ತದಾನ ಶಿಬಿರದ ಆಯೋಜಕರನ್ನು ಅಭಿನಂದಿಸಿದ ಶಾಸಕರು ಇವರುಗಳ ಪ್ರಯತ್ನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
