ಸಾರ್ವಜನಿಕ ಸ್ಮಶಾನಕ್ಕೆ ಒತ್ತಾಯ: ಅಣಕು ಶವ ಪ್ರದರ್ಶನದ ಮುಖಾಂತರ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಧರಣಿ

ಸಾರ್ವಜನಿಕ ಸ್ಮಶಾನಕ್ಕೆ ಒತ್ತಾಯ:  ಅಣಕು ಶವ ಪ್ರದರ್ಶನದ ಮುಖಾಂತರ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ಧರಣಿ

ಮಡಿಕೇರಿ:ಸಾರ್ವಜನಿಕ ಸ್ಮಶಾನಕ್ಕೆ ಒತ್ತಾಯಿಸಿ ಸ್ಮಶಾನ ಹೋರಾಟ ಸಮಿತಿ ವತಿಯಿಂದ ಅಣಕು ಶವ ಪ್ರದರ್ಶನದ ಮುಖಾಂತರ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಜೂ.೧೬ರಂದು ಧರಣಿ ನಡೆಸಲಾಗುವುದು ಎಂದು ಸಮಿತಿ ಸಂಚಾಲಕ ಪಿ.ಆರ್.ಭರತ್ ತಿಳಿಸಿದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 12,000 ಜನಸಂಖ್ಯೆಯಿದೆ. ಬಹುತೇಕ ಸಾರ್ವಜನಿಕರಿಗೆ ಸ್ವಂತ ಸ್ಮಶಾನವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಸಾರ್ವಜನಿಕರು ಮರಣಹೊಂದಿದ ಸಂದರ್ಭ ಬೆಟ್ಟದಕಾಡು ರಸ್ತೆಯಲ್ಲಿರುವ ಕಾವೇರಿ ನದಿ ದಡದಲ್ಲಿರುವ ಅರ್ಧ ಎಕರೆ ಜಾಗದಲ್ಲಿ ಮಣ್ಣು ಮಾಡಲಾಗುತ್ತಿತ್ತು. ಆದರೆ, ಇಂದು ನಿರಂತರ ಕಾವೇರಿ ನದಿ ಪ್ರವಾಹದಲ್ಲಿ ಶವಗಳು ಕಾವೇರಿ ನದಿ ಪಾಲಾಗುತ್ತಿದೆ. ಪರಿಣಾಮ ನೀರು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಸಾರ್ವಜನಿಕರ ಸ್ಮಶಾನಕ್ಕಾಗಿ ಒತ್ತಾಯಿಸಿ ಧರಣಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಮ್ಮೆ ಸಂಸ್ಕಾರ ಮಾಡಿದ ಜಾಗದಲ್ಲಿ ಮತ್ತೊಂದು ಶವ ಸಂಸ್ಕಾರ ಮಾಡಬೇಕಾಗಿದೆ. ನೆಲ್ಯಹುದಿಕೇರಿ ಗ್ರಾಮದಲ್ಲಿ ಮರಣ ಹೊಂದಿದ ಶವಗಳನ್ನು ಪಕ್ಕದ ಗ್ರಾಮ ಪಂಚಾಯಿತಿ ಸ್ಮಶಾನಗಳಿಗೆ ಕೊಂಡೊಯ್ಯ ಬೇಕಾದ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಬರಡಿ, ಕಾರಬಾಣೆ ಪ್ರದೇಶಗಳಲ್ಲಿ ಗುರುತಿಸಿರುವ ಜಾಗ ಕೂಡ ನದಿ ದಡದಲ್ಲಿದೆ. ಕೇವಲ ಅಂಗೈ ಅಗಲ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಪರಿಸ್ಥಿತಿಯಿದೆ ಎಂದರು.

ಸಾರ್ವಜನಿಕರಿಗೆ ಶವ ಸಂಸ್ಕಾರಕ್ಕೆ ಯೋಗ್ಯವಾದ ಭೂಮಿಯನ್ನು ನೀಡುವಂತೆ ಹಲವಾರು ಹೋರಾಟ ಮಾಡಿದರು ಪ್ರಯೋಜನವಾಗಲಿಲ್ಲ. ಬೆಟ್ಟದಕಾಡು ಸರ್ವೆ ನಂ ೧೭೭ರ ೧ ಎಕರೆ ೨ ಸೆಂಟ್ಸ್ ಜಾಗ ಒತ್ತುವರಿದಾರರಿಂದ ಬಿಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲು ಗ್ರಾಮ ಪಂಚಾಯಿತಿ ಹಿಂದೇಟು ಹಾಕುತ್ತಿದೆ. ನೆಲ್ಯಹುದಿಕೇರಿ ಗ್ರಾ.ಪಂ ಭೂ ಮಾಫಿಯಾ ಮತ್ತು ರಿಯಲ್ ಎಸ್ಟೇಟ್‌ದಾರರ ಹಿಡಿತದಲ್ಲಿದೆ ಎಂದು ಆರೋಪಿಸಿದ ಅವರು, ಇಲ್ಲಿರುವ ಅಧಿಕಾರಿಗಳು ಕೂಡ ಆಸಕ್ತಿ ತೋರುತ್ತಿಲ್ಲ. ಕಣ್ಣಿದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿ ಜಾಗದಲ್ಲೇ ಶವ ಸಂಸ್ಕಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಎದುರಾಗುವ ಸಂಘರ್ಷಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ ಅವರು, ಕೂಡಲೇ ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಜಾಗ ಕೊಡಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಟಿ.ಟಿ.ಉದಯ್‌ಕುಮಾರ್, ವಿ.ನಾರಯಣ್, ಪಿ.ಜಿ.ಸುರೇಶ್, ವಿ.ವಿ.ಪ್ರಭಾಕರ್, ಕೆ.ಜಿ.ರಮೇಶ್ ಉಪಸ್ಥಿತರಿದ್ದರು.