ಸುಂಟಿಕೊಪ್ಪ ಜನತೆ ಉಚಿತ ಪವರ್ ಕಟ್ ಭಾಗ್ಯ! ಪೂರ್ವಸೂಚನೆ ನೀಡದೇ ವಿದ್ಯುತ್ ಕಡಿತ:ಸಾರ್ವಜನಿಕರ ಆಕ್ರೋಶ

ಸುಂಟ್ಟಿಕೊಪ್ಪ:ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆಯಡಿಯಲ್ಲಿ ಅರ್ಹರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿದ್ದರೆ ಸುಂಟಿಕೊಪ್ಪಕ್ಕೆ ಈ ಉಚಿತದೊಂದಿಗೆ ಸೆಸ್ಕ್ ನ ಕೃಪಾಕಟಾಕ್ಷದೊಂದಿಗೆ ಪವರ್ ಕಟ್ ಭಾಗ್ಯ ಕೂಡ ಲಭಿಸುತ್ತಿದೆ. ಅದು ಕೂಡ ಅನಿಯಮಿತವಾಗಿ. ಒಂದು ಕೊಂಡರೆ ಇನ್ನೊಂದು ಉಚಿತ ಎಂಬಂತಾಗಿದೆ. ಸುಂಟಿಕೊಪ್ಪ ಭಾಗದಲ್ಲಿ ಒಂದು ವಾರದಿಂದ ಹಳೇ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ,ಹೊಸದನ್ನು ಅಳವಡಿಸುವ ಹಾಗೂ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈ ಕಾರ್ಯವನ್ನು ಕೈಗೊಳ್ಳಬೇಕಾಗಿದ್ದು ಅನಿವಾರ್ಯ. ಇದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಈ ಸಂದರ್ಭವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕಾಗಿದ್ದು ಕೂಡ ಅತ್ಯಗತ್ಯ. ಆದರೆ ಸುಂಟಿಕೊಪ್ಪ ಸೆಸ್ಕ್ ನ ಸ್ಥಳೀಯ ಅಧಿಕಾರಿಗಳು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ಮುಂಚಿತವಾಗಿ ಪ್ರಚಾರಪಡಿಸುತ್ತಿಲ್ಲ. ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ. ವಿದ್ಯುತ್ ಸೌಲಭ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಕ್ಕಾಗಿ ಪವರ್ ಕಟ್ ಮಾಡಲು ಯಾರೂ ಕೂಡ ಆಕ್ಷೇಪ ಮಾಡುವುದಿಲ್ಲ. ಮೊದಲೇ ತಿಳಿಸಿದರೆ ಆ ಸಮಯಕ್ಕೆ ಅಡ್ಜಸ್ಟ್ ಆಗಬಹುದು. ಮುಖ್ಯರಸ್ತೆಯಲ್ಲಿ ಹೊಸ ಕಂಬಗಳನ್ನು ಅಳವಡಿಸುತ್ತಿದ್ದರಿಂದ ವಿಷಯ ಅರಿಯದೇ ಸ್ಥಳೀಯರ ಹೆಚ್ಚಿನ ವಾಹನಗಳು ರಸ್ತೆಗಿಳಿದು ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೊದಲೇ ತಿಳಿದಿದ್ದರೆ ಸ್ಥಳೀಯರು ರಸ್ತೆಗೆ ವಾಹನ ಇಳಿಸುವ ಸಾಧ್ಯತೆ ಕಡಿಮೆ ಆಗಿರುತ್ತಿತ್ತು.ಬೇರೆ ಊರುಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್ ವ್ಯತ್ಯಯಗೊಳ್ಳುವ ಬಗ್ಗೆ ಹಿಂದಿನ ದಿನದಂದೇ ಪತ್ರಿಕೆ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟಣೆ ನೀಡುತ್ತಾರೆ. ಆದರೆ ಸುಂಟಿಕೊಪ್ಪದ ಸೆಸ್ಕ್ ಅಧಿಕಾರಿಗಳು ಇಂತಹ ಕಾಳಜಿಯ ಗೋಜಿಗೆ ಹೋಗದ ಕಾರಣ ಮನಬಂದಂತೆ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿದೆ. ವಿದ್ಯುತ್ ಕಡಿತಗೊಳಿಸುವ ಬಗ್ಗೆ ಮೊದಲೇ ತಿಳಿಸಬೇಕೆಂದರೆ ಅದಕ್ಕೂ ಬಿಲ್ ಕಟ್ಟಬೇಕೇ? ಎಂಬ ಕುಹಕದ ಮಾತುಗಳು ಕೂಡ ಕೇಳಿ ಬಂದಿವೆ.
ವರದಿ: ಕ್ಯೂಟ್ ಕೂರ್ಗ್ ನ್ಯೂಸ್