ಹುಲಿ ದಾಳಿಗೆ ಗಾಯಗೊಂಡ ಹಸು: ನೋವಿನ ನಡುವೆಯೂ ಕರುವಿಗೆ ಹಾಲುಣಿಸಿದ ತಾಯಿ
ಪೊನ್ನಂಪೇಟೆ :ತಾಲೂಕಿನ ಕಿರುಗೂರು ಗ್ರಾಮದ ವಿ.ಎಲ್.ಚಂದ್ರಶೇಖರ್ ಎಂಬವರ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ನಡೆದಿದೆ. ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಚೆಪ್ಪುಡಿರ ನಟೇಶ್ ಎಂಬುವರಿಗೆ ಸೇರಿದ ಹಸುವನ್ನು ಎರಡು ದಿನಗಳ ಹಿಂದೆಯಷ್ಟೇ ಹುಲಿ ಬಲಿ ಪಡೆದಿದ್ದು, ಘಟನೆ ಮಾಸುವ ಮುನ್ನವೇ ಮಂಗಳವಾರ ಸಂಜೆ ಚಂದ್ರಶೇಖರ್ ಎಂಬವವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ, ಆತಂಕ ಸೃಷ್ಟಿಸಿದೆ. ಚಂದ್ರಶೇಖರ್ ಅವರು ತಮ್ಮ ಗದ್ದೆಯಲ್ಲಿ ಮೇಯಲು ಬಿಟ್ಟಿದ ಹಸುವನ್ನು ಮಳೆ ಕಾರಣದಿಂದಾಗಿ ಕೊಟ್ಟಿಗೆಯಲ್ಲಿ ಕಟ್ಟಲು ಕಾಫಿ ತೋಟದ ಮಧ್ಯ ಭಾಗದ ರಸ್ತೆಯಲ್ಲಿ ಹೊಡೆದುಹೊಂಡು ಬರುತ್ತಿದ ಸಂದರ್ಭ ತೋಟದೊಳಗೆ ಅವಿತ್ತಿದ್ದ ಹುಲಿ ಏಕಾಏಕಿ ಹಸುವಿನ ಮೇಲೆ ದಾಳಿ ಮಾಡಿ ಕುತ್ತಿಗೆ ಹಾಗೂ ಕಾಲಿನ ಭಾಗಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಹುಲಿಯನ್ನು ಕಂಡ ಚಂದ್ರಶೇಖರ್ ಅವರು ಗಾಬರಿಯಾಗಿ ಮನೆಗೆ ಓಡಿ ಬಂದು ಪೊನ್ನಂಪೇಟೆಯ ಉಪವಲಯ ಅರಣ್ಯಾಧಿಕಾರಿ ಕೆ.ಜಿ.ದಿವಾಕರ್ ಅವರಿಗೆ ಹುಲಿ ದಾಳಿ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ಉಪವಲಯ ಅರಣ್ಯಾಧಿಕಾರಿ ಕೆ.ಜಿ.ದಿವಾಕರ್, ಗಸ್ತು ಅರಣ್ಯ ಪಾಲಕರ ಅಣ್ಣಯ್ಯ ಹಾಗೂ ಆರ್.ಆರ್.ಟಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಸುವಿನ ಕುತ್ತಿಗೆ ಹಾಗೂ ಕಾಲುಗಳಲ್ಲಿ ಹುಲಿ ದಾಳಿಯಿಂದ ಆಳವಾದ ಗಾಯವಾಗಿರುವುದು ಕಂಡು ಬಂದಿದೆ. ಮಾಹಿತಿ ತಿಳಿದ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ ಶಂಕರ್ ಅವರು ಪಶುವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದ ಹಸುವಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೋವಿನಲ್ಲೂ ಕರುವಿಗೆ ಹಾಲುಣಿಸಿದ ತಾಯಿ!
ತನ್ನ ತಾಯಿ ಮೇಯಲು ಹೋಗಿ ಬಂದು ನನಗೆ ಹಾಲುಣ್ಣಿಸುತ್ತಾಳೆ ಎಂದು ಕಾಯುತ್ತಿದ್ದ ಒಂದು ತಿಂಗಳ ಕರು ತಾಯಿಯ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ ಎನ್ನುವ ಪರಿವೇ ಇಲ್ಲದೇ, ತಾಯಿಯ ಹಾಲು ಕುಡಿಯುತ್ತಿತ್ತು. ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹಸು ತಮ್ಮ ನೋವನ್ನು ಮರೆತು ಕರುವಿಗೆ ಹಾಲುಣಿಸುತ್ತಿದ್ದ ಕರುಳು ಹಿಂಡುವ ದೃಶ್ಯವನ್ನು ಕಂಡು ಹಸುವಿನ ಮಾಲೀಕರಾದ ಚಂದ್ರಶೇಖರ್ ಹಾಗೂ ಗ್ರಾಮಸ್ಥರಲ್ಲಿ ಕಣ್ಣೀರು ತರಿಸಿತ್ತು.
ಹುಲಿ ದಾಳಿ ಕುರಿತು ಮಾತನಾಡಿದ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್ ಅವರು, ಹುಲಿಯ ಚಲನವಲನಗಳನ್ನು ಕಂಡು ಹಿಡಿಯಲು 10 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿಯ ಚಲನವಲನಗಳು ಕಂಡು ಬಂದಲ್ಲಿ ಕೂಡಲೇ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕರು, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅಲ್ಲದೆ ಹುಲಿಯ ಚಲನವಲನಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿಕೊಂಡರು.ಪಶುವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಹುಲಿ ಹಸುವಿನ ಮೇಲೆ ದಾಳಿ ಮಾಡಿರುವುದು ದೃಢಪಟ್ಟಿದೆ. ಕತ್ತಿನ ಭಾಗದಲ್ಲಿ ಸ್ವಲ್ಪ ಆಳವಾಗಿ ಹಾಗೂ ಕಾಲಿನ ಭಾಗದಲ್ಲಿ ಗಾಯ ಮಾಡಿರುವುದು ಕಂಡು ಬಂದಿದೆ. ಎಂದು ತಿಳಿಸಿದರು. ಈ ಸಂದರ್ಭ ಕಿರುಗೂರು ಗ್ರಾಮದ ಅಧ್ಯಕ್ಷ ಅಲೆಮಾಡ ಸುದೀರ್, ಕಾಕೇರ ರಾಜೇಶ್, ಕಾಕೇರ ಅಪ್ಪಿ ಮಂಜುನಾಥ, ಪೊಕ್ಕಳಿಚಂಡ ಬೋಪಣ್ಣ, ವಿ.ಎಲ್.ಗಣೇಶ್, ವಿ.ಎಲ್.ಮಂಜುನಾಥ್, ಆರ್.ಆರ್.ಟಿ ಸಿಬಂದಿಗಳಾದ ಕಾಕೇರ ಸನ್ನಿ, ಸಶಾಂಕ್, ಸಂಜು ಕುಮಾರ್, ಅರುಣ, ಭರತ್, ಸಚಿನ್, ಪೂಣಚ್ಚ, ಪುನೀತ್, ಶೈಲೇಶ್ ಮತ್ತಿತರರು ಇದ್ದರು.
ವರದಿ:ಚೆಪ್ಪುಡಿರ ರೋಷನ್