ಮೈಸೂರು: ಮಳೆಯಲ್ಲಿಯೇ ಫ್ಲೈ ಓವರ್‌ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಯದುವೀರ್‌

ಮೈಸೂರು: ಮಳೆಯಲ್ಲಿಯೇ ಫ್ಲೈ ಓವರ್‌ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಯದುವೀರ್‌

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫ್ಲೈ ಓವರ್‌, ಅಂಡರ್‌ ಪಾಸ್‌ ಅತಿ ಶೀಘ್ರದಲ್ಲಿ ನಿರ್ಮಾಣವಾಗಲಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಚಾಮರಾಜ ಕೃಷ್ಣದತ್ತ ಒಡೆಯರ್‌ ತಿಳಿಸಿದ್ದಾರೆ.

ಮೈಸೂರಿನ ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ) ಯಲ್ಲಿ ನಡೆಯುತ್ತಿರುವ ಫ್ಲೈ ಓವರ್‌ ಹಾಗೂ ಇತರೆಡೆ ನಡೆಯುತ್ತಿರುವ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ನಂತರ ಮಾಹಿತಿ ನೀಡಿದರು.ಮೈಸೂರು ನಂಜನಗೂಡು ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ಲೈ ಓವರ್ ರಸ್ತೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚುವರಿ ಮಾಹಿತಿ ಪಡೆದುಕೊಂಡೆ ಎಂದು ಸಂಸದರು ತಿಳಿಸಿದರು.

ಈ ಯೋಜನೆಯ ಸಂಪೂರ್ಣ ಯೋಜನಾ ವರದಿ 2010ರಲ್ಲೇ ಸಿದ್ಧವಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2023ರಲ್ಲಿ ಇದಕ್ಕೆ ಅನುಮೋದನೆ ನೀಡಿತು. ಆದರೆ ಸ್ಥಳೀಯ ಸಮಸ್ಯೆಗಳಿಂದ ಕಳೆದ ಹತ್ತು ತಿಂಗಳುಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ನಿರ್ಮಾಣ ಕಾರ್ಯ ಚುರುಕು ಪಡೆದುಕೊಂಡಿದೆ. ಹೊರ ವರ್ತುಲ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಿದೆ ಎಂದು ಯದುವೀರ್‌ ತಿಳಿಸಿದರು.

ಮಳೆಯಲ್ಲಿಯೇ ಕಾಮಗಾರಿ ಪರಿಶೀಲನೆ:

ಮಳೆ ಬರುತ್ತಿದ್ದರೂ ಸಂಸದರು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.ನಂತರ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಯದುವೀರ್‌ ಪರಿಶೀಲನೆ ನಡೆಸಿದರು.

ಜುಲೈನಲ್ಲಿ ಎರಡು ಅಂಡರ್‌ ಪಾಸ್‌ ಪೂರ್ಣ:

ಎರಡು ಅಂಡರ್‌ ಪಾಸ್‌ ಕಾಮಗಾರಿ ಮುಂದಿನ ಜುಲೈ ತಿಂಗಳ ಮೊದಲ ವಾರದ ವೇಳೆಗೆ ಪೂರ್ಣಗೊಳ್ಳಲಿದೆ. ಉಳಿದ ಎರಡು ಅಂಡರ್‌ ಪಾಸ್‌ ಕಾಮಗಾರಿ ಅತಿ ಶೀಘ್ರದಲ್ಲಿಯೇ ಚುರುಕು ಪಡೆದುಕೊಳ್ಳಲಿದೆ ಎಂದು ತಿಳಿಸಿದರು.ಮೈಸೂರಿನ ರಿಂಗ್ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.

ಶಾಸಕ ಶ್ರೀವತ್ಸ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಗಳು, ಸ್ಥಳೀಯ ಮುಖಂಡರು ಹಾಜರಿದ್ದರು