ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಪಾಷಣಮೂರ್ತಿ ದೇವಸ್ಥಾನದ ದೈವಗಳ ವಾರ್ಷಿಕ ಉತ್ಸವ

ಪೊನ್ನಂಪೇಟೆ:ತಾಲೂಕಿನ ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗುಟಗೇರಿ ಗ್ರಾಮದ ಕಲ್ಲುಕೋರೆಯಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಪಾಷಣಮೂರ್ತಿ ದೇವಸ್ಥಾನದ ದೈವಗಳ ವಾರ್ಷಿಕ ಉತ್ಸವವು ವಿನು ಪೂಜಾರಿ ಅವರ ಮುಂದಾಳತ್ವದಲ್ಲಿ ಎರಡು ದಿನ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮೊದಲ ದಿನದಂದು ಬಾಬು ಬೆಳ್ಳಾರೆ ಹಾಗೂ ತಂಡದವರ ನಾದಸ್ವರದೊಂದಿಗೆ, ಪಾಷಣಮೂರ್ತಿ ದೇವರಿಗೆ ಪೂಜೆ ಸಲ್ಲಿಸುವುದರೊಂದಿಗೆ ದೈವಗಳ ಕೋಲಕ್ಕೆ ಚಾಲನೆ ನೀಡಲಾಯಿತು. ವಾರ್ಷಿಕ ಉತ್ಸವದ ಪ್ರಯುಕ್ತ ಪಂಜುರುಳಿ, ಧರ್ಮದೇವತೆ, ಪಾಷಣಮೂರ್ತಿ, ಗುಳಿಗ, ಕೊರಗಜ್ಜ ತೆರೆಗಳು ಭಕ್ತರ ಕಣ್ಮನ ಸೆಳೆದವು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಭಕ್ತಾದಿಗಳು, ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ದೇವರ ಉತ್ಸವದಲ್ಲಿ ಪಾಲ್ಗೊಂಡು ದೇವರ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು. ಕಲ್ಲುಕೋರೆಯ ಪಾಷಣ ಮೂರ್ತಿ ದೇವಸ್ಥಾನದ ಅರ್ಚಕರಾದ ವಿನೋದ್ ಪೂಜಾರಿ ಅವರು ಮಾತನಾಡಿ, ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಈ ದೇವಾಲಯದ ವಾರ್ಷಿಕ ಉತ್ಸವವನ್ನು ಮುಂದುವರೆಸಿಕೊಂಡು ಬರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಚಿಂತನೆ ಇದೆ ಎಂದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ