ವಿರಾಜಪೇಟೆ: ಸಹಕಾರ ಕಾಯ್ದೆ-ಕಾನೂನು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಕುರಿತು ಶಿಕ್ಷಣ ಕಾರ್ಯಕ್ರಮ
ವಿರಾಜಪೇಟೆ: ಮಹಿಳೆಯರನ್ನು ಉದ್ಯಮಶೀಲರನ್ನಾಗಿಸಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಶಿಬಿರಗಳು, ಕಾರ್ಯಾಗಾರಗಳು ಸಹಕಾರಿಯಾಗಲಿದೆ ಎಂದು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಕೊಡಗು ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಸಭಾಂಗಣ(ಮಹಿಳಾ ಸಮಾಜ)ದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ. ಮಡಿಕೇರಿ, ಕೊಡಗು ಮಹಿಳಾ ಸಹಕಾರ ಸಂಘ ವಿರಾಜಪೇಟೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗೆ ಸಹಕಾರ ಕಾಯ್ದೆ-ಕಾನೂನು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಅಧ್ಯಕ್ಷ ರಾಬಿನ್ ದೇವಯ್ಯ ಅವರು, ಮಾಹಿತಿ ಶಿಕ್ಷಣ ಮತ್ತು ಸಂಪರ್ಕ ಕ್ರಾಂತಿಯ ಯುಗದಲ್ಲಿ ಮಹಿಳೆಯರುಜ ಸಬಲರಾಗಬೇಕು. ಉದ್ದಿಮೆಯ ಕಡೆಗೆ ಹೆಚ್ಚು ಆಸ್ಥೆ ವಹಿಸಬೇಕು. ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ವಿವಿಧ ವಿಷಯಗಳಲ್ಲಿ ನೈಪುಣ್ಯತಾ ತರಬೇತಿಗಳನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಉದ್ಯಮಶೀಲತಾ ಶಿಬಿರದಲ್ಲಿ ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ, ಇಲಾಖೆಗಳಿಂದ ದೊರೆಯುವ ಸೌಲಭ್ಯಗಳು, ಬ್ಯಾಂಕ್ಗಳಿಂದ ಲಭಿಸುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ನಿರುದ್ಯೋಗಿ ಅಭ್ಯರ್ಥಿಗಳು, ಉದ್ಯಮಿಗಳು, ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರು, ರೈತರು, ಮಹಿಳಾ ಸ್ವ-ಸಹಾಯ ಸಂಘದವರು ಪ್ರಯೋಜನ ಪಡೆಯಬೇಕೆಂದು. ಮಹಿಳೆಯರು ಸಬಲರಾದರೆ ದೇಶವೇ ಸಬಲವಾದಂತೆ ಎಂದು ತಿಳಿಸಿದರು.
ಕೊಡಗು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಅನೇಕ ಮಹಿಳೆಯರಲ್ಲಿ ಉದ್ದಿಮೆ ಆರಂಭಿಸುವ ಉತ್ಸಾಹ ಇದ್ದರೂ ಮಾಹಿತಿ ಕೊರತೆಯಿಂದ ಹಿಂದೆಟು ಹಾಕಿರುತ್ತಾರೆ. ಅಂತವರಿಗೆ ಉದ್ದಿಮೆ ರಂಗದ ಸಮಗ್ರ ಮಾಹಿತಿ ನೀಡಬೇಕಿದೆ.
ಅವರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶವೇ ಈ ಕಾರ್ಯಕ್ರಮದಾಗಿದೆ. ಸರಕಾರಿ ಅಧಿಕಾರಿಗಳಿಂದ, ವಿವಿಧ ಯೋಜನೆ ಬ್ಯಾಂಕ್ ಅಧಿಕಾರಿಗಳಿಂದ ಸಾಲ ಸೌಲಭ್ಯಗಳ ಮಾಹಿತಿ ಒದಗಿಸುವುದು, ಯಶಸ್ವಿ ಮಹಿಳಾ ಉದ್ಯಮಿಗಳ ಯಶೋಗಾಥೆ ಸೇರಿದಂತೆ ಹಲವು ವಿಚಾರಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರು, ನಿವೃತ್ತ ಪ್ರಾಂಶುಪಾಲರಾದ ಎಂ.ಎಂ. ಶ್ಯಾಮಲಾ ಅವರು ಸಹಕಾರ ಸಂಘಗಳಿಗೆ ಸಂಬಂಧಿಸಿದ ಕೆಲವು ಕಾನೂನು ಹಾಗೂ ಇತ್ತಿಚೆಗೆ ಆದ ಕೆಲವು ಕಾನೂನು ತಿದ್ದುಪಡಿ ಕುರಿತಂತೆ ಮಾಹಿತಿ ನೀಡಿದರು.
ಮೃದು ಕೌಶಲ್ಯ ತರಬೇತುದಾರರು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಮೈಸೂರಿನ ಎಚ್.ಎಸ್. ಕೃಷ್ಣಮೂರ್ತಿ ಅವರು ಉಪನ್ಯಾಸ ನೀಡಿ ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಜೊತೆಯಲ್ಲಿ ಸೂಕ್ತ ಪೆÇ್ರೀತ್ಸಾಹದ ಅವಶ್ಯಕತೆ ಇದೆ. ಸ್ವಯಂ ಉದ್ಯೋಗ ತರಬೇತಿ ಪಡೆದು ಬಿಡುವಿನ ವೇಳೆಯಲ್ಲಿ ಅಲಂಕಾರಿಕಾ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಗೃಹ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಂತ ಉದ್ಯೋಗ ಮಾಡುವ ಶಕ್ತಿ ಹೊಂದಿದ್ದರೂ ಪ್ರೋತ್ಸಾಹ, ಮಾರ್ಗದರ್ಶನ ಕೊರತೆಯಿಂದ ಗೊಂದಲಕ್ಕೆ ಸಿಲುಕುತ್ತಾರೆ. ಸರಕಾರದಿಂದ ನೀಡುವ ಮಾಹಿತಿ ಜತೆ ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಸ್ವಂತ ಉದ್ಯೋಗ ಮಾಡಬೇಕು. ಜೇನು ಸಾಕಾಣಿಕೆ, ಹೈನುಗಾರಿಕೆ, ಹೀಗೆ ಹಲವಾರು ವಿಷಯಗಳಲ್ಲಿ ತರಬೇತಿ ನೀಡಿದಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಿ ಆರ್ಥಿಕ ಸ್ವಾವಲಂಭಿಗಳಾಗಲು ಹೆಚ್ಚಿನ ಸಹಕಾರಿಯಾಗುತ್ತದೆ ಎಂದರು.
ಸರಕಾರದಿಂದ ಸ್ವ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಉದ್ಯಮ ನಿರ್ವಹಣೆ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಇತ್ಯಾದಿ ವಿಷಯಗಳ ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರುಗಳಾದ ಎಂ.ಟಿ. ಸುಬ್ಬಯ್ಯ, ಎ.ಸಿ. ಕುಶಾಲಪ್ಪ, ಎಸ್.ಆರ್. ಸುನಿಲ್ ರಾವ್, ವಿರಾಜಪೇಟೆ ತಾಲೂಕು ಸಹಕಾರ ಕೂಟ ನಿಯಮಿತದ ಅಧ್ಯಕ್ಷ ಎ.ಡಿ. ಸುಧೀರ್, ಇದ್ದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಗೂ ವ್ಯವಸ್ಥಾಪಕರಾದ ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಮಹಿಳಾ ಸಹಕಾರ ಸಂಘದ ಸದಸ್ಯರುಗಳು, ವಿರಾಜಪೇಟೆ ಮಹಿಳಾ ಸಹಕಾರ ಸಂಘದ ಸದಸ್ಯರುಗಳು ಹಾಜರಿದ್ದರು.