ಸರಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಬಲ ನೀಡಿ: ಎ.ಎಸ್ ಪೊನ್ನಣ್ಣ

ಸರಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಬಲ ನೀಡಿ: ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ :ತಾಲೂಕಿನ ಬಿರುನಾಣಿ ಭಾಗದಲ್ಲಿ, ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರ ವಿಶೇಷ ಅನುದಾನದಲ್ಲಿ ಮತ್ತು ಮಳೆ ಪರಿಹಾರ ನಿಧಿಯನ್ನು ಬಳಸಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಇಂದು ಸಂಜೆ ನೆರವೇರಿಸಲಾಯಿತು.    

ದಿನನಿತ್ಯ ನೂರಾರು ಜನರು ಓಡಾಡುವ ಈ ರಸ್ತೆಗಳು ಹದಗೆಟ್ಟಿರುವುದನ್ನು ಈ ಹಿಂದೆ ಮಾನ್ಯ ಶಾಸಕರ ಗಮನಕ್ಕೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ತಂದಿದ್ದರು. ಸಾರ್ವಜನಿಕರ ಮನವಿಗೆ ಕೂಡಲೇ ಸ್ಪಂದಿಸಿದ ಮಾನ್ಯ ಶಾಸಕರು, ವಿಶೇಷ ಅನುದಾನ ಒದಗಿಸಿ ಈ ಭಾಗದ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಜನಸಾಮಾನ್ಯರು ಯಾವಾಗಲೂ ಸರಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಬಲ ನೀಡುತ್ತಾ, ಉತ್ತಮ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ತನ್ನ ಕ್ಷೇತ್ರದ ಜನರ ಶ್ರೇಯೋಭಿವೃದ್ಧಿಗೆ ತಾನು ಸದಾ ಚಿಂತನೆ ನಡೆಸುತ್ತಿದ್ದು ಸಾರ್ವಜನಿಕರು ಸಹ ತನ್ನೊಂದಿಗೆ ಕೈಜೋಡಿಸಬೇಕೆಂದು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ,ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕುಪಣ್ಣಮಾಡ ಪ್ರೀತಮ್,ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಲಾಲ ಅಪ್ಪಣ್ಣ,ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.