ತೆಲಂಗಾಣದ ರಂಗಾರೆಡ್ಡಿಯಲ್ಲಿ ಭೀಕರ ಬಸ್–ಲಾರಿ ಡಿಕ್ಕಿ: 24 ಮಂದಿ ಸಾವು
ಹೈದರಾಬಾದ್, ನ. 3: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಮಂಡಲದ ಮಿರ್ಜಾಗುಡ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು, ಅನೇಕರಿಗೆ ಗಂಭೀರ ಗಾಯಗಳಾಗಿವೆ.
ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ದುರ್ಘಟನೆಯ ತೀವ್ರತೆಯಿಂದ ಲಾರಿ ಬಸ್ ಮೇಲೆಯೇ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೂರ್ ಡಿಪೋಗೆ ಸೇರಿದ ಬಸ್ ಸುಮಾರು 70 ಪ್ರಯಾಣಿಕರೊಂದಿಗೆ ಹೈದರಾಬಾದ್‌ಗೆ ಹೊರಟಿತ್ತು.
ಡಿಕ್ಕಿಯ ಪರಿಣಾಮವಾಗಿ ಲಾರಿಯ ಜಲ್ಲಿಕಲ್ಲುಗಳು ಬಸ್ ಒಳಗೆ ಸುರಿದು ಅನೇಕರು ಬಸ್ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಘಟನಾ ಸ್ಥಳವು ಕ್ಷಣಾರ್ಧದಲ್ಲಿ ರಣರಂಗವಾಗಿ ಮಾರ್ಪಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಪ್ರಯಾಣಿಕರ ಸಹಾಯಕ್ಕಾಗಿ ಕೂಗಾಟಗಳ ನಡುವೆ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಮೃತರಲ್ಲಿ ಬಸ್ ಮತ್ತು ಲಾರಿಯ ಚಾಲಕರು, ಹಲವು ಮಹಿಳೆಯರು, ಹತ್ತು ತಿಂಗಳ ಶಿಶು ಮತ್ತು ಅದರ ತಾಯಿ ಸೇರಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ತುರ್ತು ಸೇವಾ ತಂಡಗಳು ತಲುಪಿದ್ದು, ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ಅವಶೇಷ ತೆರವು ಕಾರ್ಯಾಚರಣೆ ನಡೆಸಲಾಯಿತು. ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದವರನ್ನು ಹೈದರಾಬಾದ್‌ನ ವಿವಿಧ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ವಿದ್ಯಾರ್ಥಿಗಳು ಹಾಗೂ ಕಚೇರಿ ನೌಕರರು ಹೆಚ್ಚಿನವರಾಗಿದ್ದು, ವಾರಾಂತ್ಯದ ರಜೆಯ ಬಳಿಕ ಹೈದರಾಬಾದ್‌ಗೆ ಹಿಂತಿರುಗುವ ವೇಳೆ ಈ ದುರಂತ ಸಂಭವಿಸಿದೆ. ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
