5 ವರ್ಷ ಕಳೆದರೂ ಚಾರ್ಜ್ ಶೀಟ್ ರೂಪಿಸಿಲ್ಲ; ಪತ್ನಿಯ ಪ್ರಿಯಕರನ ಕೊಲೆ ಆರೋಪಿಗೆ ಹೈಕೋರ್ಟ್ ನಿಂದ ಜಾಮೀನು

ಮುಂಬೈ: ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿ ಬಂಧನದಲ್ಲಿದ್ದ 30 ವರ್ಷದ ಆಟೋ ರಿಕ್ಷಾ ಚಾಲಕ ದೀಪಕ್ ಮೋರ್ ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2020ರ ನವೆಂಬರ್ 15ರಂದು ನಡೆದ ಘಟನೆಯಲ್ಲಿ ಮೋರ್ ತಮ್ಮ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಸ್ಥಳೀಯ ಯುವಕ ಸಂಜಯ್ ನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಘಟನೆಯ ತಕ್ಷಣವೇ ಯುವಕನ ಸಹೋದರಿ ದೂರು ದಾಖಲಿಸಿದ್ದರಿಂದ, ಮೋರ್ ನನ್ನು ಬಂಧಿಸಲಾಗಿತ್ತು.
ನ್ಯಾಯಮೂರ್ತಿ ಡಾ. ನೀಲಾ ಗೋಖಲೆ ಅವರ ಮುಂದಿರುವ ವಿಚಾರಣೆಯಲ್ಲಿ, ಪ್ರಕರಣವನ್ನು 95 ಬಾರಿ ಆರೋಪ ರೂಪಿಸಲು ಪಟ್ಟಿ ಮಾಡಿದರೂ, ಇಂದಿಗೂ ಔಪಚಾರಿಕವಾಗಿ ಚಾರ್ಜ್ ಶೀಟ್ ಸಲ್ಲಿಸಲಾಗಿಲ್ಲವೆಂಬ ಸಂಗತಿ ಬೆಳಕಿಗೆ ಬಂತು. “ ಚಾರ್ಜ್ ಶೀಟ್ ಸಲ್ಲಿಸುವ ಹಂತವೇ ವಿಚಾರಣೆಯ ಆರಂಭ. ಆದರೆ ಐದು ವರ್ಷಗಳಾದರೂ ಅದು ನಡೆದಿಲ್ಲ” ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.
ಆರೋಪಿಯ ಪರ ವಕೀಲರು, ಮೋರ್ ವಿರುದ್ಧ ಯಾವುದೇ ಕ್ರಿಮಿನಲ್ ಇತಿಹಾಸವಿಲ್ಲ, ಘಟನೆ ಪೂರ್ವಯೋಜಿತವಲ್ಲ ಮತ್ತು ವಿಚಾರಣೆಯಿಲ್ಲದೆ ಐದು ವರ್ಷಗಳಿಂದ ಆರೋಪಿ ಜೈಲಿನಲ್ಲಿ ಇದ್ದಾರೆ ಎಂದು ವಾದಿಸಿದರು. ಪ್ರಾಸಿಕ್ಯೂಷನ್ ಪರವಾಗಿ, ಆರೋಪಿಯನ್ನು ನಿಯಮಿತವಾಗಿ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತಿದೆ, ಆದ್ದರಿಂದ ಜಾಮೀನು ನೀಡಬಾರದು ಎಂದು ಪ್ರತಿಪಾದಿಸಲಾಯಿತು.
ನ್ಯಾಯಾಲಯವು ಘಟನೆಯು ಸಾಂದರ್ಭಿಕವಾಗಿ ಆಕ್ರೋಶದಿಂದ ನಡೆದಿದ್ದು, ಮತ್ತೊಂದು ಅಪರಾಧ ಮಾಡುವ ಸಾಧ್ಯತೆ ಕಡಿಮೆ ಎಂದು ಪರಿಗಣಿಸಿ, ಮೋರ್ ಗೆ ರೂ.50,000 ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಜೊತೆಗೆ, ಪ್ರತಿ ಎರಡು ವಾರಗಳಿಗೊಮ್ಮೆ ಡೊಂಬಿವ್ಲಿ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಕಲ್ಯಾಣ್ ತಾಲೂಕಿಗೆ ಪ್ರವೇಶಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.